ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. 

ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ್ಯವೆಂದರೆ ಏನನ್ನಾದರೂ ಸಾಧಿಸುವ ಅವಕಾಶ  ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕಿದ್ದರು. ನಿಜವಾದ ಸ್ವಾತಂತ್ರ್ಯ ಎಂದರೆ ಅಭಿವೃದ್ಧಿ ಪ್ರತಿಯೊಬ್ಬರಿಗೂ ತಲುಪಿದಾಗ ಹಾಗೂ ಪ್ರತಿಯೊಬ್ಬರೂ ಈ ಅಗತ್ಯ ಸೌಲಭ್ಯಗಳನ್ನು ಪಡೆದಾಗ ಸಾಧ್ಯವಾಗುವುದು.  ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿಯರು ನೀಡಿದ ತ್ಯಾಗಗಳಿಗೆ ಗೌರವ ಸಲ್ಲಿಸಿದ ಅವರು, “ಆಧುನಿಕ ಭಾರತವನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ,ಅದಕ್ಕೆ ಸಮೂಹ ಶ್ರಮ ಅಗತ್ಯ. ಶಿಕ್ಷಕರು ಕೇವಲ ವೃತ್ತಿಯಲ್ಲಿಲ್ಲ, ಸೇವೆಯಲ್ಲಿ ಇದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತವನ್ನು ಕಟ್ಟುವವರಾಗಿದ್ದಾರೆ ಎಂದರು. ಇಂತಹ ಮೌಲ್ಯಯುತ ಶಿಕ್ಷಣ ಪಡೆದ ವಿಧ್ಯಾರ್ಥಿ ಸಮೂಹದಿಂದ ನವ ಭಾರತದ ನಿರ್ಮಾಣ ಸಾಧ್ಯ ಎಂದರು. 

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ ಡಾ. ಗ್ರಿಶ್ಮಾ, ಡಾ.ಹನಾ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಹಾಗೂ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. 

ಜಿಟಿ ಜಿಟಿ ಮಳೆಯ ನಡುವೆಯೂ ವ್ಯವಸ್ಥಿತ ಆಚರಣೆ

ಎನ್‍ಸಿಸಿ ಕೆಡೆಟ್ ಸೀನಿಯರ್ ಅಂಡರ್ ಆಫೀಸರ್ ಅರ್ಚನಾ ನಾಗರಾಜ್ ಅವರಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಎನ್‍ಸಿಸಿ ಜೂನಿಯರ್ ಅಂಡರ್ ಆಫೀಸರ್‍ಗಳಾದ ಸಂಜುಶ್ರೀ, ಗೀತಾ, ನಯನಾ ಹಾಗೂ ರಾಣಿ ಅತಿಥಿಗಳನ್ನು ವೇದಿಕೆಗೆ ಕರೆತಂದರು. ಪೆರೇಡ್ ಕಮಾಂಡರ್ ಭರತ್ ಗೌಡ ಅವರಿಂದ ವರದಿ ಪಡೆದು ಧ್ವಜರೋಹಣ ಮಾಡಲಾಯಿತು. ಜಿಟಿ ಜಿಟಿ ಮಳೆಯ ನಡುವೆಯೂ ವಿಚಲಿತರಾಗದೆ ವಂದೇ ಮಾತರಂ, ರಾಷ್ಟ್ರ ಗೀತೆ ಹಾಗೂ ದೇಶ ಭಕ್ತಿಗೀತೆ ಕೋಟಿ ಕಂಠೋನ್ಸೆ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು. 

ತದ ನಂತರ ಅಜಯ್ ವಾರಿಯರ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.