ಮುಂಬಯಿ, ಡಿ. 23: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ಶ್ರೀ 108 ವಿಶ್ವಪ್ರಸನ್ನ ಶ್ರೀಪಾದಂಗಳವರು ಕಳೆದ ಮೂರು ದಿನಗಳಿಂದ ಮುಂಬಯಿನಲ್ಲಿ ಮೊಕ್ಕಾಂ ಹೂಡಿದ್ದು ಭಾನುವಾರ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಉಪಸ್ಥಿತ ಭಕ್ತರನ್ನು ಅನುಗ್ರಹಿಸಿ ಶ್ರೀಪೇಜಾವರ ಮಠದ ಸಾಮಾಜಿಕ, ಶೈಕ್ಷಣಿಕ ಹಾಗೂ ಗೋಶಾಲೆಗಳಿಗೆ ಧನ ಸಹಾಯ ಕೋರುತ್ತಾ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಹಾಗೂ ಮಹಾನಗರದ ಇನ್ನಿತರ ಭಜನಾ ಮಂಡಳಿಗಳು ಭಜನೆಗೈದರು. ಶ್ರೀಪಾದರು ನೆರೆದ ಸಮಸ್ತ ಭಕ್ತಾಭಿಮಾನಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವಚಿಸಿದರು.
ಮಠದಲ್ಲಿನ ಶಿಲಾಮಯ ಮಂದಿರದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಶಾಖೆಯ ಆಡಳಿತಾಧಿಕಾರಿ ಡಾ| ರೆಂಜಾಳ ರಾಮದಾಸ ಉಪಾಧ್ಯಾಯ ಅವರು ಪೂಜೆ ನೆರವೇರಿಸಿದರು. ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಶ್ಯಾಮಲ ಶಾಸ್ತ್ರಿ ದಂಪತಿ ಶ್ರೀಪಾದರ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್ ರಾವ್, ಆಶಾ ಎ.ರಾವ್ ಪದಾಧಿಕಾರಿಗಳು, ವಿಶ್ವಸ್ಥರು, ಸದಸ್ಯರುಗಳು, ಪರೇಲ್ ಶ್ರೀನಿವಾಸ ಭಟ್, ಶ್ರೀ ಪೇಜಾವರ ಮಠ ಮುಂಬಯಿ ಇದರ ಪ್ರಬಂಧಕರಾದ ಶ್ರೀಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ಇತರ ಪುರೋಹಿತÀರು, ಮಹಿಳಾವೃಂದ ಮತ್ತು ಭಕ್ತರನೇಕರು ಉಪಸ್ಥಿತರಿದ್ದು ಸಾಂಪ್ರದಾಯಿಕವಾಗಿ ಗೌರವಿಸಿ ಶ್ರೀಗಳವರಿಗೆ ಸುಖಾಗಮನ ಬಯಸಿದರು.