ಮುಂಬಯಿ:  ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ) ಮುಂಬಯಿ ಶಾಖೆಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಶರನ್ನವರಾತ್ರಿ ದುರ್ಗಾ ನಮಸ್ಕಾರ ಪೂಜೆ ವಿಜೃಂಭನೆಯಿಂದ ನಡೆಸಲ್ಪಟ್ಟಿತು. 

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಡಾ| ಎ.ಎಸ್ ರಾವ್ ಯಜಮಾನತ್ವದಲ್ಲಿ, ವಿಶ್ವಸ್ಥ ಮಂಡಳಿಯ ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಭಕ್ತರ ಕೂಡುವಿಕೆಯಲ್ಲಿ ಪೇಜಾವರ ಮಠದ ವ್ಯವಸ್ಥಾಪಕ ಡಾ| ರಾಮದಾಸ್ ಉಪಾಧ್ಯಾಯ ರೆಂಜಾಳ ತನ್ನ ಪ್ರಧಾನ ಪೌರೋಹಿತ್ಯ ಮತ್ತು ನೇತೃತ್ವದಲ್ಲಿ ದುರ್ಗಾ ಪೂಜೆ ನೆರವೇರಿಸಲ್ಪಟ್ಟಿತು.

ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಪರಮಾನುಗ್ರಹದಿಂದ ಮಠದಲ್ಲಿನ ಶ್ರೀಕೃಷ್ಣನ ಸನ್ನಿಧಾನದಲ್ಲಿ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಮಧ್ವೇಶ ಭಜನಾ ಮಂಡಳಿ ಇನ್ನಿತರ ಮಂಡಳಿಗಳು ವಿಶೇಷ ಭಜನೆಯೊಂದಿಗೆ ಆರಾಧನೆ ನಡೆಸಿದವು. ಹಿರಿಯ ಪುರೋಹಿತ ರಾಮದಾಸ್ ಉಪಾಧ್ಯಾಯ ಪೂಜೆಗೈದು ಬಳಿಕ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ದುರ್ಗಾ ನಮಸ್ಕಾರ ಪೂಜೆ ನೆರವೇರಿಸಿ ದುರ್ಗಾಮಾತೆಯು ಲೋಕದಲ್ಲಿ ಬಂದಿರುವ ಕಷ್ಟಗಳನ್ನು ಪರಿಹರಿಸಲಿ ಎಲ್ಲಾ ಭಕ್ತರಿಗೂ ಮಾತೆಯ ಅನುಗ್ರಹ ಆಗಲಿ ಎಂದು ಉಪಸ್ಥಿತ ಭಕ್ತರನ್ನು ಅನುಗ್ರಹಿಸಿದರು.

ಪೇಜಾವರ ಮಠದ ವ್ಯವಸ್ಥಾಪಕರಾದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಪುರೋಹಿತರಾದ ಪವನ ಭಟ್ ಅಣ್ಣಿಗೇರಿ, ಮುಕುಂದ್ ಬೈತಮಂಗಲ್‍ಕರ್ ಮತ್ತಿತರರ ಸಹ ಪೌರೋಹಿತ್ಯ, ಸಹಕಾರದಿಂದ ಹಾಗೂ ಇತರ ಪುರೋಹಿತರು, ಮಠದ ಎಲ್ಲಾ ಸಿಬ್ಬಂದಿ ವರ್ಗದ ವಿಶೇಷ ಕಾಳಜಿಯಿಂದ ಭಕ್ತಾಭಿಮಾನಿಗಳ ಸಹಯೋಗದಿಂದ ವಾರ್ಷಿಕ ದುರ್ಗಾ ನಮಸ್ಕಾರ ಪೂಜೆಯು ಸಂಪನ್ನಗೊಂಡಿತು.