(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ: ಮಂಗ್ಳೂರಿಯನ್ ಅಂದರೆ ಪ್ರಭಾವಿಗಳು ಎಂದರ್ಥ. ಪರಿಶ್ರಮ, ಪ್ರಾಮಾಣಿಕತೆ ಮತ್ತು ಚುರುಕುತನಕ್ಕೆ ಮಂಗ್ಳೂರಿಯನ್ ಜನರು ಪ್ರಸಿದ್ಧರು. ಮುಂಬಯಿ, ಮಹಾರಾಷ್ಟ್ರಕ್ಕೆ ಮಂಗ್ಳೂರಿಯನ್ನರ ಕೊಡುಗೆಯೂ ಅಪಾರವಾಗಿದೆ. ರಾಜಕಾರಣಿಗಳಿಗೆ ಯಾವುದೇ ಗಡಿಯಿಲ್ಲ ಆದ ಕಾರಣ ಒಂದೆಡೆ ರಾಜಕಾರಣಿಗಳು ಶಕ್ತಿಯುತ ಉಪಕರಣಗಳಂತಿರುತ್ತಾರೆ. ಮತ್ತೊಂದೆಡೆ ರಾಜಕೀಯ ಶಕ್ತಿಯೆಂದರೆ ನೀರಿನ ಮೇಲಿನಗುಳ್ಳೆಗಳಂತಿರುತ್ತಾರೆ. ರಾಜಕಾರಣ ಎಂದಿಗೂ ಗಣಿತವಲ್ಲ ಬದಲಾಗಿ ರಸಾಯನ ಶಾಸ್ರವಾಗಿದೆ. ರಾಜಕೀಯವು ಬಹಳ ರಹಸ್ಯ, ಉದಾತ್ತ ಮತ್ತು ಛಲದ ಕೆಲಸವಾಗಿದೆ. ಪ್ರಸ್ತುತ ಎಲ್ಲರಿಗೂ ರಾಜಕಾರಣಿಗಳಾಗುವ ಆಶಯ ಉದ್ಭವಿಸಿದೆ. ಕಾರಣ ಇದೊಂದು ಕೆಟ್ಟ ವೃತ್ತಿಯಲ್ಲ ಬದಲಾಗಿ ಶಕ್ತಿಯುತ ಕೆಲಸವಾಗಿದೆ ಮತ್ತು ರಾಜಕಾರಣವು ಹರಿಯುವ ನೀರಾಗಿದೆ. ಆದ್ದರಿಂದ ಕ್ರೈಸ್ತರು ಆದಷ್ಟು ರಾಜಕೀಯದಲ್ಲಿ ಆಸಕ್ತರಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಎಂಎಲ್‍ಸಿ ಐವಾನ್ ಡಿ'ಸೋಜಾ ತಿಳಿಸಿದರು.
ಮುಂಬಯಿ ಉಪನಗರದ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹೊಟೇಲ್ ಸಾಯಿ ಪ್ಯಾಲೇಸ್‍ನಲ್ಲಿ ಇಂದಿಲ್ಲಿ ಮಂಗಳವಾರ ರಾತ್ರಿ ಮಂಗ್ಳೂರಿಯನ್ ಕಮ್ಯೂನಿಟಿ ಬಿಸ್ನೆಸ್ ಫಾರಂ ಮುಂಬಯಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಐವಾನ್ ಡಿ'ಸೋಜಾ ಮಾತನಾಡಿದರು.
ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ (ಸಿಸಿಸಿಐ) ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿಸೋಜಾ ಅಧ್ಯಕ್ಷತೆ ಹಾಗೂ ಆಲ್ ಇಂಡಿಯಾ ಟ್ರಾನ್ಸ್ ಪೋರ್ಟ್ ಕಾಂಗ್ರೇಸ್ ಕರ್ನಾಟಕ ರಾಜ್ಯಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಸಂಯೋಜಕ, (ಕೆನರಾ ಪಿಂಟೋ ಟ್ರಾವೆಲ್ಸ್ , ನಿತ್ಯಾಧರ್ ಇಲೆಕ್ಟ್ರಿಕಲ್ (ಮುಂಬಯಿ) ಇದರ ಮಾಲಕ ಸುನೀಲ್ ಪಾಯ್ಸ್ ಪುತ್ತೂರು ಇವರ ಪ್ರಧಾನ ಸಂಚಾಲಕತ್ವದಲ್ಲಿ ಜರುಗಿಸಲಾದ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಸುರೇಶ್ ಹೆಚ್.ಶೆಟ್ಟಿ, ಸಿಸಿಸಿಐ ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ರೆ| ಫಾ| ನೋರ್ಬರ್ಟ್ ಡಿಸೋಜಾ, ಪಾಸ್ಟರ್ ದೇವ್‍ದನ್ ತ್ರಿಭುವನ್, ಡೈಮೆನ್ಸಿಯನ್ (ಗ್ಲೋಬಲ್ ಕ್ರಿಶ್ಚನ್‍ಸ್ ಛೇಂಬರ್ ಆಫ್ ಕಾಮರ್ಸ್) ಕಾರ್ಯಾಧ್ಯಕ್ಷ ಸಿಲ್ವೆಸ್ಟರ್ ರೋಡ್ರಿಗಸ್, ಲಾರೇನ್ಸ್ ಎಂಡ್ ಮಾಯೋ ಸಂಸ್ಥೆಯ ಕಾರ್ಯಾಧ್ಯಕ್ಷ ವಿವೇಕ್ ಮೆಂಡೋನ್ಸಾ, ಮುಂಬಯಿ ಕಾಂಗ್ರೆಸ್ (ಐ) ಪಕ್ಷದ ಹಿರಿಯ ಉಪಾಧ್ಯಕ್ಷೆ, ಮಾಜಿ ಮಹಿಳಾಧ್ಯಕ್ಷೆ ಜಾನೆಟ್ ಎಲ್.ಡಿ'ಸೋಜಾ ವೇದಿಕೆಯಲ್ಲಿದ್ದು ಐವಾನ್ ಡಿ'ಸೋಜಾ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸುರೇಶ್ ಶೆಟ್ಟಿ ಮಾತನಾಡಿ ಶ್ರೇಷ್ಠ ಸಮಾಜಸೇವಕರೆಣಿಸಿ ರಾಜಕಾರಣಿಗಳಾಗಿ ಸೇವೆ ಸಲ್ಲಿಸುವ ರಾಜಕಾರಣಿಗಳು ತಮ್ಮ ಖಾಸಾಗಿ ಬದುಕನ್ನು ಮರೆತು ಬಾಳುವುದು ಅನಿವಾರ್ಯ. ರಾಜಕಾರಣಿಗಳಲ್ಲಿನ 90% ರಾಜಕಾರಣಿಗ ಳು ಆರೋಗ್ಯವಂತರಾಗಿ ಕಂಡರೂ ಒಳಒಳಗೆ ಅಸ್ವಸ್ಥರಾಗಿರುತ್ತಾರೆ. ಐವಾನ್ ಅವರದ್ದು ಕಾಂತೀಯ ವ್ಯಕ್ತಿ ನಿಷ್ಠತೆ, ಸಾರ್ವಜನಿಕ ಜೀವನದಲ್ಲಿ ಆಕರ್ಷಕ ವ್ಯಕ್ತಿಯಾಗಿ ಗುರುತಿಸಿಕೊಂಡ ಕಾರಣ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ಸಾಮಾಜಿಕ, ಧಾರ್ಮಿಕ, ಆರ್ಥಿಕ, ಜ್ಞಾನ, ನ್ಯಾಯಾಂಗ, ಅಧಿಕಾರಶಾಹಿ, ಮಾಧ್ಯಮ ಪ್ರಭುತ್ವದ ಶಕ್ತಿಗಳು ಇಂದು ಸಮಾಜವನ್ನು ಆಳುತ್ತಿದ್ದು ಇವನ್ನೆಲ್ಲವನ್ನೂ ಮೀರಿ ಆಳುವ ಧೀಶಕ್ತಿ ಇದೆಯಾದರೆ ಅದು ರಾಜಕೀಯ ಆಧಿಪತ್ಯವಾಗಿದೆ. ಇಂತಹ ಶಕ್ತಿಯನ್ನು ಮೈಗೂಡಿಸಿ ಮುನ್ನಡೆಯುತ್ತಿರುವ ಐವಾನ್ ಇಂದು ಓರ್ವ ನಿಷ್ಠಾವಂತ ರಾಜಕಾರಣಿ ಆಗಲು ಸಾಧ್ಯವಾಗಿದೆ. ಐವಾನ್ ಅವರು ರಾಜಕಾರಣಿಕ್ಕಿಂತ ಸಮಾಜ ಸುಧಾರಕ, ಶ್ರೇಷ್ಠ ಸೇವಕರಾಗಿದ್ದಾರೆ. ಕ್ರೈಸ್ತ ಸಮುದಾಯದಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ತ್‍ನ ಸದಸ್ಯರಾಗಿ ಆಯ್ಕೆಯಾದ ಹಿರಿಮೆ ಅವರದ್ದು. ಅವರೋರ್ವ ಪರಿಪಕ್ವತೆಯ ರಾಜಕಾರಣಿ ಆಗಿದ್ದಾರೆ. ಇನ್ನು ರಾಜ್ಯದಲ್ಲಿ ಸಚಿವರಾಗಿ, ಮುಂದೊಂದು ದಿನ ಕೇಂದ್ರ ಸಚಿವರಾಗಿ ಕಾಣುವ ಭಾಗ್ಯ ನಮ್ಮದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ರೂವಾರಿಗಳಾದ ಕಥೋಲಿಕ್ ಸಭಾ ಮುಂಬಯಿ ಮಾಜಿ ಉಪಾಧ್ಯಕ್ಷ ಲಾರೆನ್ಸ್ ಡಿಸೋಜಾ ಮುಲುಂಡ್, ವಿಫುಲ್ ರೋಡ್ರಿಗಸ್, ಜೋನ್ ರೆಬೆಲ್ಲೋ ಚೆಂಬೂರು, ಐವಾನ್ ಆನಂದ್ ಡಿ'ಸೋಜಾ ನಕ್ರೆ, ಸಿಎ| ಅರುಣ್ ವಾಸ್, ಅಂಧೇರಿ ಜಿಲ್ಲಾ ಮುಂಬಯಿ ಕಾಂಗ್ರೆಸ್ (ಐ) ಪಕ್ಷದ ಅಧ್ಯಕ್ಷ ಕ್ಲೈವ್ ಡಾಯಸ್, ಫ್ರಾನ್ಸಿಸ್ ಕಾಸ್ತೆಲಿನೋ ಮಹಾಕಾಳಿ, ಕ್ಲೆಮೆಂಟ್ ಎ.ಲೋಬೊ, ಪೀಟರ್ ಡಿಸೋಜಾ ಸಯಾನ್, ಜೇಮ್ಸ್ ಡೆಸಾ ಪೆರಂಪಳ್ಳಿ, ಅಮಿತ್ ಜಗನ್ನಾಥ್ ಶೆಟ್ಟಿ, ಸೋಹೆಲ್ ಖಾನ್ ಭಿವಂಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಐವಾನ್ ಡಿ'ಸೋಜಾ ಅವರಿಗೆ ಶುಭಕೋರಿದರು.
ಜಾನೆಟ್ ಎಲ್.ಡಿ'ಸೋಜಾ ಸ್ವಾಗತಿಸಿ ಪ್ರಸ್ತಾವನೆಗೈದ ಐವಾನ್ ಅವರನ್ನು ಪರಿಚಯಿಸಿದರು. ಫಾ| ನೋರ್ಬರ್ಟ್ ಡಿಸೋಜಾ ಆಶೀರ್ವಚನ ನುಡಿಗಳನ್ನಾಡಿದರು.