ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶರಾಗಿದ್ದ ಶ್ರೀ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಐದನೇ ಆರಾಧನಾ ಮಹೋತ್ಸವವು ಗುರುವಾರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಬೆಳಗ್ಗಿನಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲ್ಪಟ್ಟಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಷ್ಣು ಸಹಸ್ರ ನಾಮ ಅರ್ಚನೆ ಮತ್ತು ಪಾರಾಯಣ, ಭಗವದ್ಗೀತಾ ಪಾರಾಯಣ, ಭಾಗವತ ಪಾರಾಯಣ, ಚಕ್ರಾಬ್ದ ಮಂಡಲಾರಾಧನೆ ಸೇರಿದಂತೆ ಪೇಜಾವರ ಮಠದ ಮದ್ವೇಶ ಭಜನಾ ಮಂಡಳಿಯಿಂದ ಭಜನೆ, ಕೀರ್ತನೆ ನಡೆಯಿತು.

ಶ್ರೀ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಗುರುಗಳ ಸಂಸ್ಮರಣೆ ಮಾಡುತ್ತಾ ಗುರುಗಳು ಪೂರ್ಣಪ್ರಜ್ಞ ವಿದ್ಯಾಪೀಠ ಕಟ್ಟಿ ಬೆಳೆಸಿದ ರೀತಿಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗೋವಿಂದ ಭಟ್ ಅವರು ಶ್ರೀಗಳ ತ್ಯಾಗಮಯ ಜೀವನವನ್ನು, ಹರಿ ಭಟ್ ಅವರು ಹರಿದ್ವಾರ ಯಾತ್ರೆಯ ಸಂದರ್ಭವನ್ನು ಹಾಗೂ ಪರೇಲ್ ಶ್ರೀನಿವಾಸ ಭಟ್ ಅವರು 5 ಪರ್ಯಾಯದಲ್ಲಿ ತನ್ನ ಸೇವೆಯನ್ನು ನೆನಪಿಸಿಕೊಂಡರು.



ಈ ಸಂದರ್ಭದಲ್ಲಿ ಪೇಜಾವರ ಮಠ ಮುಂಬಯಿ ಶಾಖೆಯ ಹರಿ ಭಟ್, ನಿರಂಜನ್ ಗೋಗ್ಟೆ, ರಾಮ ವಿಠಲ ಕಲ್ಲೂರಾಯ, ಗೋಪಾಲಕೃಷ್ಣ ಟ್ರಸ್ಟ್‍ನ ವಿಶ್ವಸ್ಥ ಸದಸ್ಯ ಬಿ.ಆರ್ ರಾವ್ ಕಲೀನಾ, ಡಾ| ಸುರೇಂದ್ರಕುಮಾರ್ ಹೆಗ್ಡೆ, ಕಳತ್ತೂರು ವಿಶ್ವನಾಥ ಶೆಟ್ಟಿ, ಶೇಖರ ಜೆ.ಸಾಲ್ಯಾನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.