ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಮಹಾವೀರ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳು ಬಹಳ ಹೆಸರುವಾಸಿ. ಅದಕ್ಕೆ ಸಮೀಪದಲ್ಲಿರುವ ಹುಡ್ಕೋ ಕಾಲೋನಿಯು ಈಗ ಬಹಳ ಪ್ರಖ್ಯಾತವಾಗುತ್ತಿದೆ. ಹುಡ್ಕೋ ಕಾಲೋನಿಯಲ್ಲಿ ಪುರಸಭೆಯವರ ಉಸ್ತುವಾರಿಯ ಲಯನ್ಸ್ ಬಾಲವನ ಹಾಗೂ ಅದರ ಸುತ್ತಲಿನ ಪಾರ್ಕ್ ಇಡೀ ದೇಶದ ಗಮನ ಸೆಳೆಯಲು ಸುಂದರವಾಗಿದೆ. ಈ 16ನೇ ವಾರ್ಡಿನ ಬಾಲವನದ ಸುತ್ತ ಆರ್‌.ಸಿ.ಸಿ. ಚರಂಡಿಯನ್ನು ಅರೆಬರೆ ಮಾಡಿ ಮುಗಿಸಿ ಕೈ ತೊಳೆದುಕೊಂಡಿರುವ ಪುರಸಭೆಯವರು ಅದನ್ನು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಬಾಲವನದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕಿಯ ಅಡಿಯಲ್ಲಿಯೇ ಪುರಸಭೆ ಸೊಳ್ಳೆಯನ್ನು ಉತ್ಪಾದಿಸಿ ಮುಫತ್ತಾಗಿ ಪರಿಸರದ ಜನರಿಗೆ ನೀಡುತ್ತಿದೆ. ಮುಚ್ಚಿಡಬೇಕಾಗಿದ್ದ ಆರ್.ಸಿ.ಸಿ. ಚರಂಡಿ ಬಾಯಿ ತೆರೆದು ಎರಡು ಮೂರು ಕಡೆಗಳಲ್ಲಿ ಸಂಜೆ 6:00 ಗಂಟೆ ಗೋಧೂಳಿ  ಲಗ್ನದಲ್ಲಿ ಸರಿಯಾಗಿ ಸೊಳ್ಳೆಗಳ ಇಂಪಾದ, ಸುಶ್ರಾವ್ಯವಾದ ಗಾಯನಕ್ಕೆ ಇಡೀ ಮೂಡುಬಿದಿರೆಯ ಜನತೆ ತಲೆ ಅಲ್ಲಾಡಿಸಬಹುದು ಎಂದು ಪರಿಸರದ ಜನತೆ ಹೊಗಳುತ್ತಿದ್ದಾರೆ. 

ಅಲ್ಲಿಂದ ಮುಂದಕ್ಕೆ ಪ್ರಾಂತ್ಯ ಗ್ರಾಮದ ವಿಶಾಲನಗರದ ಅಂಗನವಾಡಿಯ ಸಮೀಪವು ಕೂಡ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತಿದೆ. ಹಾಗಾಗಿ ಮೇಲೆ ಚಲಿಸಲು ಸಾಧ್ಯವಾಗದೇ ಇರುವ ನಾಗರಿಕರು ಈ ಕೆಳಗಿನ ಪ್ರದೇಶದಲ್ಲಿ ಕೂಡ ಇದ್ದುಕೊಂಡು ಸೊಳ್ಳೆಗಳ ನಿನಾದವನ್ನು ಸವಿಯಬಹುದಾಗಿರುತ್ತದೆ. ಅತ್ಯಂತ ಚಿಕ್ಕ ಮಕ್ಕಳು ಕಲಿಯುವ ಅಂಗನವಾಡಿಯ ಬದಿಯ ಪ್ರದೇಶದಲ್ಲಿ ಮೂರು ಕಡೆಯ ಚರಂಡಿಗಳು ಸೇರಿ ಸುವಾಸನೆಯನ್ನು ಹೊರ ಸೂಸಿ ಮುಂದಕ್ಕೆ ಪ್ರಾಂತ್ಯ ಶಾಲೆಯ ಬದಿಗೆ ತೆರೆದ ಚರಂಡಿಯ ರೀತಿಯಲ್ಲಿ ನೀರು ಮುಂದುವರೆಯುತ್ತದೆ. ಅಂಗನವಾಡಿಯ ತನಕ ಮುಚ್ಚಿಕೊಂಡು ಬರುವ ಚರಂಡಿ ಆ ಪ್ರದೇಶದಲ್ಲಿ ತೆರೆಯಲ್ಪಟ್ಟು ಸೊಳ್ಳೆಗಳಿಗೆ ಬಿಜೋತ್ಪಾದನಾ ಕೇಂದ್ರವಾಗಿ ಪರಿವರ್ತಿತವಾಗಿದೆ. ಇದು ಮೂಡುಬಿದಿರೆ ಪುರಸಭೆಗೆ ಅಂಗನವಾಡಿಯ ಮಕ್ಕಳ ಮೇಲಿರುವ ಅಗಾಧವಾದ ಪ್ರೀತಿಯನ್ನು ತೋರಿಸುತ್ತದೆ. 

ಹಿಂದೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಲೇಖನದಲ್ಲಿ ಸೂಚಿಸಿದ ಯಾವುದೇ ವಿಚಾರಗಳು ಕೂಡ ಇದುವರೆಗೂ ಸರಿಪಡಿಸಲಾಗಿಲ್ಲ. 

1. ಬಸ್ಸು ನಿಲ್ದಾಣದ ಒಳಗಿನ ನಾಗರಿಕರು ನಿಲ್ಲುವ ಸ್ಥಳದ ಸಿಮೆಂಟ್ ಎದ್ದು ಹೋಗಿರುವುದು. 

2. ಸ್ವರಾಜ್ಯ ಮೈದಾನದಿಂದ ಅಧಿಕೃತ ಪರವಾನಿಗೆ ಫಾಸ್ಟ್ ಫುಡ್ಡು ಗೆ ಇಲ್ಲದೆ ಫಾಸ್ಟ್ ಫುಡ್ ನೀಡುತ್ತಿರುವ ಅಂಗಡಿಗಳನ್ನು ನಿವಾರಿಸಿ ಸ್ವರಾಜ್ ಮೈದಾನವನ್ನು ಶುಚಿಯಾಗಿಡುವದು.

3. ಬಸ್ಸು ನಿಲ್ದಾಣದ ಪ್ರವೇಶ ದ್ವಾರದ ಬದಿಯ ಹಾಸುಗಲ್ಲುಗಳು ಎದ್ದು ಹೋಗಿದ್ದು ನಡೆದಾಡುವವರ ಚಪ್ಪಲಿ, ಕಾಲು ಸಿಲುಕಿ, ವಾಹನಗಳ ಟೈಯರ್ ಗಳು ಸಿಲುಕಿ ಒದ್ದಾಡುವದು..

4. ಬಸ್ಸು ನಿಲ್ದಾಣದ ರಿಕ್ಷಾ ಸ್ಟ್ಯಾಂಡ್ ನ ಎದುರು ಮಧ್ಯದಲ್ಲಿ ನೀರಿನ ಪೈಪ್ ಒಡೆದು ನಾಲ್ಕಾರು ತಿಂಗಳುಗಳಿಂದ ಸರಿಪಡಿಸದೆ ನೀರು ಸೋರಿಕೆಯಾಗುತ್ತಿರುವದು.

5. ಬಸ್ಸು ನಿಲ್ದಾಣದಲ್ಲಿರುವ ಅಹಿಂಸಾ ಮಿತ್ರರ ಹಳೆಯ ಕುಡಿಯುವ ನೀರಿನ ರಚನೆ ನಿವಾರಿಸಲ್ಪಡದೆ ಇರುವದು. 

6. ಪ್ರಸಕ್ತ ಶಾಸಕರ ಕುಡಿಯುವ ನೀರಿನ ಎಲಿಕ್ಸರ್ ಯ ಶುದ್ಧೀಕರಣ ಮಾಡದೆ ಹಲವಾರು ತಿಂಗಳುಗಳೆ ಕಳೆದಿವೆ ಎಂದಿದ್ದಾರೆ ಪರಿಸರದ ಅಂಗಡಿಗಳವರು. 

7. ಕುಡಿಯುವ ನೀರಿನ ಪೈಪು ಒಡೆದು ಅದರ ನೀರು ಬಸು ನಿಲ್ದಾಣದಲ್ಲಿ ಚಲ್ಲಲ್ಪಡುತ್ತಿದೆ. 

8. ಮುಖ್ಯ ರಸ್ತೆಯ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಯ ಹೊರಗಿನ ಪ್ರಯಾಣಿಕರ ಕಾಲು ಮಾರ್ಗವನ್ನು ಅತಿಕ್ರಮಿಸಿರುವುದು ಯಥಾವತ್ ಮುಂದುವರೆದಿದೆ. ಉದಾಹರಣೆಗೆ ಹಳೆಯ ಮಾರುಕಟ್ಟೆಗೆ ಎದುರು, ಆಂಜನೇಯ ದೇವಾಲಯದ ಎದುರು, ನ್ಯೂ ಪಡಿವಾಳ್ಸ್ ಎದುರು, ರೋಟರಿ ಶಾಲೆಯ ಮಾರ್ಗ-ಪೊಲೀಸ್ ಠಾಣೆ ಎದುರು, ಸತ್ಯನಾರಾಯಣ ದೇವಾಲಯದ ಎದುರು. ನೋಟಿಸು ನೀಡಿ ನಿವಾರಿಸದೆ ಇದ್ದಲ್ಲಿ, ದಂಡ ಹಾಕಿ ನಿವಾರಿಸುವ ಕ್ರಮ ಕೈಗೊಳ್ಳಲು ಉದಾಸೀನತೆಯೇ ಅಥವಾ ಇತರ ವ್ಯಾಪಾರಿಗಳು ರಸ್ತೆಯಲ್ಲಿ ಬಂದು ಕುಳಿತುಕೊಳ್ಳಬೇಕೆ ಎಂದು ದಾರಿಹೋಕರು ಕೇಳುತ್ತಿದ್ದಾರೆ. 

9. ಬಸ್ಸು ನಿಲ್ದಾಣದ ಖಾಸಗಿ ವಾಹನ ನಿಲುಗಡೆಯ ಬಗ್ಗೆ ಸಾಕಷ್ಟು ಬಾರಿ ಚರ್ಚೆ ವರದಿ ಪ್ರಕಟವಾದರೂ ಅಲ್ಲಿಯ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳ ನಿಗದಿ ಮಾಡುವ ಕ್ರಮ.

10. ಅಲಂಗಾರಿನ ಎರಡುವರೆ ಸೆಂಟ್ಸ್ ಪ್ರದೇಶಕ್ಕೆ ತೆರಳುವ ಸಿಮೆಂಟ್ ರಸ್ತೆ ರಚನೆಗೊಂಡು ಕೇವಲ ಎರಡು ವರ್ಷಕ್ಕೆ ಮೊದಲೇ ಹೊಂಡಗುಂಡಿಗಳಾಗಿರುವದು.

11. ಹಳೆಯ ಬಸ್ಸು ನಿಲ್ದಾಣದಿಂದ ಹೊಸ ಬಸ್ ನಿಲ್ದಾಣ ಕ್ಕೆ ಬರುವ ಮೆಟ್ಟಿಲಿನ ಬದಿಗಳಿಗೆ ಸಿಮೆಂಟ್ ನ ತಡೆ ನಿರ್ಮಾಣ ಮತ್ತು ಶುಚಿಗೊಳಿಸಿದ ರಿಕ್ಷಾ ನಿಲ್ದಾಣದ ಹಿಂದಿನ ಪ್ರದೇಶದ ಮೇಲ್ಗಡೆ ಕಸ ಕೆಳಕ್ಕೆ ಹಾಕಿದಂತೆ ಸಿಮೆಂಟ್ ತಡೆ.

ಇದೆಲ್ಲದರ ಬಗ್ಗೆ ಸಂಬಂಧಪಟ್ಟ ವಾರ್ಡಿನ ಸದಸ್ಯರುಗಳು, ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ವಿರೋಧ ಪಕ್ಷದ ಮುಖಂಡರು, ಹಾಗೂ ಮುಖ್ಯಾಧಿಕಾರಿ, ಅಧಿಕಾರಿಗಳೆಲ್ಲರ ಮುತುವರ್ಜಿಯ ಕೊರತೆ ಎದ್ದು ಕಾಣುತ್ತಿದೆ ಎಂದು ನಾಗರಿಕರು ದೂರುತ್ತಿದ್ದಾರೆ.