ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।
ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।
ಸಣ್ಣತನ ಸವೆಯುವುದು – ಮಂಕುತಿಮ್ಮ ।।
ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು ಊಹಿಸಿದ್ದೇ ಸತ್ಯ ಎಂದು ಕೆಲವೊಮ್ಮೆ ಮೂರ್ಖರಂತೆ ವರ್ತಿಸುತ್ತಿರುತ್ತೇವೆ. ನಮ್ಮ ನೋವುಗಳಿಗೆ ಮತ್ಯಾರನ್ನೋ ಹೊಣೆ ಮಾಡಿರುತ್ತೇವೆ. ಯಾವುದೋ, ಯಾರದೋ ವೈಯಕ್ತಿಕ ವಿಷಯಗಳು ನಮ್ಮ ಟೇಬಲ್ ನ ಬಿಸಿ ಬಿಸಿ ಚರ್ಚೆಗಳಾಗಿರುತ್ತವೆ. ಅಂತರಂಗದ ಶಾಂತಿ ಕದಡಿಸುವಲ್ಲಿ ಸುಲಭವಾಗಿ ಯಶಸ್ವಿಯಾಗುತ್ತಿರುವ ಅಂತರ್ಜಾಲದಲ್ಲಿ ಅನೇಕ ವಿಷಯಗಳು ಹರಿದಾಡುತ್ತವೆ. ಆ ಸುದ್ದಿಗಳು ನಿಜಕ್ಕೂ ಸತ್ಯವೋ, ಸುಳ್ಳೋ, ನಮಗೆ ಅಗತ್ಯವಿರುವಂತವ ಅಥವಾ ಅನಗತ್ಯವೋ, ಅವುಗಳಿಂದ ಮತ್ಯಾರ ಬದುಕಿನ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಯೋಚನೆಯನ್ನೇ ಮಾಡದೇ ಶೇರ್ ಮಾಡಿರುತ್ತೇವೆ. ನಾಲ್ಕಾಣೆ ಉಪಯೋಗವಿಲ್ಲದ ವಿಚಾರಗಳಿಗೆ ತಲೆ ಕೆಡಿಸಿಕೊಂಡು ನಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಂಡಿರುತ್ತೇವೆ. ಅತಿಯಾಗಿ ಅನಗತ್ಯ ವಿಚಾರಗಳಿಗೆ ಕಿವಿಗೊಡುತ್ತ, ನಮ್ಮೊಳಗಿನ ದನಿಗೆ ಕಿವಿಯಾಗುವುದನ್ನೇ ಮರೆತುಬಿಡುತ್ತೇವೆ..! ಒಟ್ಟಾರೆ ನಮ್ಮೊಟ್ಟಿಗಿನ ನಮ್ಮ ಮಧುರ ಬಾಂಧವ್ಯದ ಕೊಂಡಿಯನ್ನು ಬಾಹ್ಯ ಜಂಜಾಟಗಳೊಳಗೆ ಮುಳುಗಿ ನಾವೇ ಕಳೆದುಕೊಂಡಿರುತ್ತೇವೆ..! ಅಸಲಿಗೆ ಇದೆಲ್ಲದರಿಂದ ಆದ ಉಪಯೋಗವಾದರೂ ಏನೂ.? ಎಂದು ಓಡುವ ನಮ್ಮ ಮನಸ್ಸಿಗೆ ಬ್ರೇಕ್ ಹಾಕಿ ಒಮ್ಮೆ ಆತ್ಮಾವಲೋಕನ ಮಾಡಿಕೊಂಡರೆ, ನಾವೆಷ್ಟು ನಮ್ಮ ಬದುಕನ್ನು ಹಾಳುಗೆಡವಿಕೊಂಡೆವು ತಿಳಿಯುತ್ತದೆ. ಒಂದಷ್ಟು ಹುಳುಕುಗಳು ಎಲ್ಲರಲ್ಲೂ ಇರುತ್ತವೆ, ನಮ್ಮೊಳಗಿನಂತೆಯೇ..! ಬರೀ ಎಲ್ಲರಲ್ಲೂ, ಎಲ್ಲದರಲ್ಲೂ ತಪ್ಪುಗಳನ್ನೇ ಹುಡುಕುವ ರೋಗಗ್ರಸ್ತರಾಗದಿರೋಣ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇಷ್ಟ - ಕಷ್ಟಗಳನ್ನು ಜಗಜ್ಜಾಹೀರು ಮಾಡಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವವರ ಕತೆಗಳನ್ನು ಗಂಟೆಗಟ್ಟಲೆ ಕೂತು ನೋಡುವ ಅಥವಾ ಕೇಳುವ ನಾವು, ನಮ್ಮ ಮನೆಯೊಳಗಿನ / ಸುತ್ತ ಮುತ್ತಲಿನವರ / ಆಪ್ತರೋ / ಸ್ನೇಹಿತರದ್ದೋ ನೋವಿಗೆ ಒಂದು ಸಣ್ಣ ಸಾಂತ್ವನ ಹೇಳಲೋ ಅಥವಾ ಸಮಯಕ್ಕೆ ಸ್ಪಂದಿಸುವ ವ್ಯವಧಾನವನ್ನೇ ಕಳೆದುಕೊಂಡಿರುತ್ತೇವೆ. ನಮ್ಮ ಸುತ್ತಲಿನ ಪರಿಸರವನ್ನು ನಾವೇ ಅರಿವಿಲ್ಲದೆ ಸಂಕುಚಿತಗೊಳಿಸಿಕೊಂಡಿರುತ್ತೇವೆ. ಯಾರಿಗೆ ಯಾವುದಕ್ಕೆ ಎಷ್ಟು ಮಹತ್ವ ಮತ್ತು ಸಮಯವನ್ನು ಕೊಡಬೇಕೆಂದು ಅರಿತುಕೊಳ್ಳದಿದ್ದರೆ, ಮುಂದೊಂದು ದಿನ ನಮ್ಮ ಅನಿವಾರ್ಯಕ್ಕೆ ಯಾರೂ ಆಗಿಬರಲಿಲ್ಲ ಎಂದು ಸಂಬಂಧಿಗಳನ್ನ ಅಥವಾ ಸಮಾಜವನ್ನ ದೂಷಿಸುವ ಮೊದಲು ಎಚ್ಚೆತ್ತುಕೊಳ್ಳದಿದ್ದರೆ, ಕಾಲವೇನೋ ಚಲಿಸುತ್ತಲೇ ಇರುತ್ತದೆ, ಜೊತೆಗೆ ನಮ್ಮ ಆಯಸ್ಸು ಕೂಡ. ಆದರೆ ನಾವು ನಿಂತಲ್ಲೇ ನಿಂತು ಕೊಳೆತಿರುತ್ತೇವೆ..! ಯಾವುದೋ ಹುಚ್ಚಿಗೆ ಬಿದ್ದು ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡ ನಂತರ ಒಂದಿನ ಬದುಕಿನ ಸಂತೆಯೊಳಗೆ ಏಕಾಂಗಿಯಾಗಿ ನಿಲ್ಲಬೇಕಾಗಿ ಬರುತ್ತದೆ. ದಿನಗಳು, ಕ್ಷಣಗಳು, ಋತುಗಳು ಎಲ್ಲವೂ ಇಲ್ಲಿ ನಿರಂತರ ಬದಲಾವಣೆಗೆ ತೆರೆದುಕೊಂಡಿವೆ. ಬದಲಾವಣೆ ಜಗದ ನಿಯಮ. ನಾವೂ ಬದಲಾಗೋಣ. ಆದರೆ ಆ ಬದಲಾವಣೆ ನಮ್ಮನ್ನು ಸಂಕುಚಿತತೆಯಿಂದ ವಿಶಾಲದೃಷ್ಟಿಯೆಡೆಗೆ, ಬದುಕಿನ ಉನ್ನತಿಯೆಡೆಗೆ ಕರೆದೊಯ್ಯುವಂತಿರಲಿ.
ಇತರರಿಗೆ ತೊಂದರೆ ಕೊಡದಂತೆ, ಇದ್ದುದರಲ್ಲೇ ಅತ್ಯುತ್ತಮ ಬದುಕು ಕಟ್ಟಿಕೊಂಡು, ಸುತ್ತುವರೆದ ಬಂಧಗಳೊಟ್ಟಿಗೆ ಒಂದು ಚೆಂದದ ಬಾಂಧವ್ಯ ಬೆಳೆಸಿಕೊಂಡು, ಎದುರಾಗೋ ಪ್ರತೀ ತಿರುವಿನಲ್ಲಿ ಕಲಿತ ಪಾಠ ಮತ್ತು ಅನುಭವಗಳೊಟ್ಟಿಗೆ ಬದುಕು ಬಂದಂತೆ ಸ್ವೀಕರಿಸುತ್ತ, ನಮ್ಮನ್ನು ನಾವು ತಿದ್ದಿಕೊಳ್ಳುತ್ತಾ ಉತ್ತಮ ಜೀವನ ಜೀವಿಸುವುದು ಪ್ರಸ್ತುತ ಕಾಲಮಾನದಲ್ಲಿ ದುಬಾರಿ ಬದುಕು. ಇಂತದೊಂದು costly ಜೀವನವನ್ನ ನಾವೆಲ್ಲರೂ ಜೀವಿಸುವುದ ಕಲಿಯೋಣ. ಇನ್ನೇನು ಕ್ಯಾಲೆಂಡರ್ ಬದಲಿಸುವ ಹೊಸ ವರ್ಷ ಬಂತು. ಅದರ ಜೊತೆ ಜೊತೆಗೆ ನಾವೂ ಒಂದಷ್ಟು ಹೊಸ ಉನ್ನತ ಯೋಚನೆ ಮತ್ತು ಸಾಧ್ಯತೆಗಳೆಡೆಗೆ ತೆರೆದುಕೊಳ್ಳೋಣ, ಹಳೆ ಪಾದಗಳ ಹೊಸ ಹೆಜ್ಜೆಗಳನ್ನು ಮಧುರವಾಗಿಸಿಕೊಳ್ಳೋಣ.. ಏನಂತೀರಿ..?
_ಪಲ್ಲವಿ ಚೆನ್ನಬಸಪ್ಪ ✍️