(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್‍ನ ಸಯಾನ್ ಪೂರ್ವದ ಗೋಕುಲ ಸಭಾಗೃಹದ ಡಾ| ಸುರೇಶ್ ರಾವ್ ಕಟೀಲು ವೇದಿಕೆಯಲ್ಲಿ ಸೋಮವಾರ ಅಪರಾಹ್ನ ಮುಂಬಯಿ `ಗೋಕುಲ' ಯಕ್ಷಗಾನ ತಾಳಮದ್ದಲೆ ಸಪ್ತಾಹವನ್ನಾಗಿಸಿ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮ ಆದಿಗೊಂಡಿತು.
ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ತನ್ನ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ವರ್ಷವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾಗಿದ್ದ ಯಕ್ಷಗಾನ ತಾಳಮದ್ದಲೆ ಸಪ್ತಾಹಕ್ಕೆ ಗೋಕುಲ ಸಂಕುಲದಲ್ಲಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣ ದೇವರಿಗೆ ಪೂಜೆ ನೆರವೆರಿಸಿ ತಾಳಮದ್ದಲೆ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ದೇವತಾ ಪ್ರಾರ್ಥನೆಗೈದು ಸಪ್ತಾಹ ಕಾರ್ಯಕ್ರಮಕ್ಕೆ ಹರಸಿ ಶುಭಾರೈಸಿದರು. ಬಿಎಸ್‍ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಪದಾಧಿಕಾರಿಗಳನ್ನೊಳಗೊಂಡು ಕಲಾವಿದರಿಗೆ ಸ್ವಾಗತಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಬಳಿಕ ಸತ್ಯನಾ ರಾಯಣ ಪುಣಿಂಚಿತ್ತಾಯ ಭಾಗವತಿಕೆಯಲ್ಲಿ ಶ್ರೀಕೃಷ್ಣವತರಣ-ಕಂಸವಧೆ ಪ್ರಸಂಗ ನಡೆಸಲ್ಪಟ್ಟಿತು. (ಕವಿ: ಪಾರ್ತಿಸುಬ್ಬ ಮತ್ತು ಮಟ್ಟಿ ವಾಸುದೇವ ಪ್ರಭು ರಚಿತ) ಪ್ರಸಂಗದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ (ಕಂಸ), ಪಶುಪತಿ ಶಾಸ್ತ್ರೀ ಶಿರಂಕಲ್ಲು (ವಸುದೇವ), ಡಾ| ಶಿವಕುಮಾರ ಆಳಗೋಡು (ದೇವಕಿ), ವಾಸುದೇವ ರಂಗಾಭಟ್ಟ ಮಧೂರು (ಶ್ರೀಕೃಷ್ಣ), ಸರ್ಪಂಗಳ ಈಶ್ವರ ಭಟ್ಟ (ಆಕ್ರೂರ) ಪಾತ್ರಧಾರಿಗಳಾಗಿ ಅರ್ಥವಿವರ ನೀಡಿದರು. ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ ಮತ್ತು ಮುರಾರಿ ಕಡಂಬಳಿತ್ತಾಯ, ಹೆಚ್. ಲಕ್ಷ್ಮೀನಾರಾಯಣ ಹಿಮ್ಮೇಳದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಬಿಎಸ್‍ಕೆಬಿಎ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ. ಪೋತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದ ಶೈಲಿನಿ ರಾವ್, ಕೆ.ಸಿ.ಕುಮಾರ್, ಆರ್. ಎಲ್ ಭಟ್ ಜೆರಿಮೆರಿ ಸೇರಿದಂತೆ ರಾಮವಿಠಲ ಕಲ್ಲೂರಾಯ, ಆರ್ಚಕ ಅಕ್ಷಯ್ ಬಲ್ಲಾಳ್, ಮಾಜಿ ಅಧ್ಯಕ್ಷ ಸುಬ್ಬಣ್ಣ ರಾವ್, ಹಿರಿಯ ಯಕ್ಷಗಾನ ಕಲಾವಿದೆ ಗೀತಾ ಆರ್. ಎಲ್ ಭಟ್ ಮತ್ತನೇಕ ಗಣ್ಯರು ಸೇರಿದಂತೆ ಹಿರಿಕಿರಿಯ ಯಕ್ಷಗಾನ ಕಲಾವಿದರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಜೂ. 15ನೇ ಭಾನುವಾರ ತನಕ ಪ್ರತೀದಿನ ಸಂಜೆ 3.00 ಗಂಟೆಯಿಂದ 7.00 ಗಂಟೆಯ ತನಕ ಶ್ರೀಕೃಷ್ಣ ಕಥಾಮೃತಮ್ ಆಗಿಸಿ ಮುಂಬಯಿ `ಗೋಕುಲ' ಯಕ್ಷಗಾನ ತಾಳಮದ್ದಲೆ ಸಪ್ತಾಹ ಹಮ್ಮಿಕೊಂಡಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.