ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 


ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಶ್ರೀಗಣೇಶ ಆಗುವದೇ ನಾಗರ ಪಂಚಮಿಯ ಮೂಲಕ. ಆಷಾಢ ಕಳೆದು ಶ್ರಾವಣ ಕಾಲಿಟ್ಟಾಕ್ಷಣ ಪಂಚಮಿಯ ದಿನವೇ ಸಡಗರ, ಸಂಭ್ರಮದ ಮೊದಲ ಮೆಟ್ಟಿಲು ನಾಗರ ಪಂಚಮಿ. ಆಷಾಢಕ್ಕೆ ತವರಿಗೆ ಹೋದ ಹೆಣ್ಣು "ಪಂಚಮಿ ಹಬ್ಬ ಉಳಿದಾವೊ ದಿನ ನಾಕ" ಎಂದು ಹಾಡಿನೊಂದಿಗೆ ಕತ್ತು ಉದ್ದ ಮಾಡಿ ಬಂದ ಅಣ್ಣನೊಂದಿಗೆ ಹೊಸ ದಿರಿಸಿನಲ್ಲಿ ನಲಿದಾಡುವ ಘಳಿಗೆ ನಿತ್ಯ ನೂತನ.

ಮುಂಜಾನೆ ಎದ್ದು ಶುಚಿರ್ಭೂತರಾಗಿ ಮೂಲ ಕುಲ ನಾಗನ ಸನ್ನಿಧಿಗೆ ತೆರಳಿ ತನು ಎರೆದು, ಹೂ, ಹಣ್ಣು, ಬೊಂಡ, ತೆಂಗಿನಕಾಯಿಯನ್ನು ಅರ್ಪಿಸಿ, ಪೂಜೆ ಮಾಡಿ ಸಾರ್ಥಕ ಭಾವವನ್ನು ಹೊಂದಲಾಗುತ್ತದೆ. ತೀರ್ಥ ಪ್ರಸಾದ ಸೇವಿಸಿದ ಬಳಿಕ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ.

ಅಣ್ಣ ತಂಗಿ ಕೂಡಿ ಪೂಜಿಸುವ ಹಬ್ಬವಾಗಿದೆ. ಸೊಂಪಾಗಿ ಬೆಳೆದ ಅರಿಶಿನದ ಎಲೆಗಳನ್ನು ನೀಟಾಗಿ ಕತ್ತರಿಸಿ ಅದಕ್ಕೆ ಅಕ್ಕಿಯನ್ನು ಅರೆದು ಬೇಯಿಸಿದ ಪೇಸ್ಟ್ ನ್ನು ಸವರಿ ನಡುವಿನಲ್ಲಿ ಬೆಲ್ಲ, ತೆಂಗಿನ ಕಾಯಿ ತುರಿಯ ಹೂರಣವನ್ನು ತುಂಬಿ ಪುನರಪಿ ಬೇಯಿಸಿ ಸವಿಯುವ ಸ್ವಾದ, ಹೊಂದುವ ಪರಿಮಳ ವರ್ಣಿಸಲು ಪದಗಳೇ ಇಲ್ಲ. ತಯಾರಿಸಲು ಬೇಕಾಗುವ ನಾಲ್ಕೈದು ಗಂಟೆಗಳ ಪರಿಶ್ರಮ ತಿಂದು ತೇಗಲು ಕೇವಲ ನಾಲ್ಕೈದು ನಿಮಿಷ ಸಾಕು. ಆದರೆ ಅದರ ಸ್ವಾದ ವರ್ಷವಿಡೀ ಬಾಯಲ್ಲಿ ನೀರೂರಿಸುವದು. ಪಾಯಸದ ಸವಿ ಸದಾ ನೆನಪಿನಲ್ಲಿ ಉಳಿಯುತ್ತದೆ. 

ಸಾಮಾನ್ಯವಾಗಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಮಹಾರಾಷ್ಟ್ರದ ಬತ್ತೀಸ ಶಿರಾಳದಲ್ಲಿ ಜೀವಂತ ನಾಗನನ್ನೇ ಪೂಜಿಸುವ ಪದ್ಧತಿ ಇಂದಿಗೂ ಇದೆ ಎಂದು ದಾಖಲೆಗಳು ಹೇಳುತ್ತವೆ.

ಪುರಾಣದ ಪ್ರಕಾರ ಸರ್ಪ ಯಜ್ಞ ಮಾಡುತ್ತಿದ್ದ ಜನಮೇಜಯನು ಯಜ್ಞವನ್ನು ನಿಲ್ಲಿಸಿದ ದಿನವೇ ನಾಗರ ಪಂಚಮಿಯಾಗಿ ಆಚರಿಸಲ್ಪಡುತ್ತದೆ ಎಂದು ಹೇಳಲಾಗುತ್ತಿದೆ. ಸಾತ್ವಿಕತೆಯನ್ನು ಗ್ರಹಿಸಲು ಉಪಯುಕ್ತ ಕಾಲವೆಂದು ನಾಗರ ಪಂಚಮಿಯನ್ನು ಪರಿಗಣಿಸಲಾಗುತ್ತದೆ.

ನಾಗರ ಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ತವೆಯನ್ನು ಒಲೆಯ ಮೇಲೆ ಇಡಬಾರದು, ಭೂಮಿಯನ್ನು ಅಗೆಯಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಇಂದಿಗೂ ಪಾಲಿಸಲಾಗುತ್ತದೆ.