ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇದ್ರದ ಸೆಮಿನಾರ್‌ ಹಾಲ್‌ ನಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಷರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ನೆರೆದಿದ್ದ ಅತಿಥಿಗಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು “ವಿವೇಕಾನಂದರ ಆದರ್ಶಗಳು ಯುವ ಜನರಿಗೆ ಸ್ಪೂರ್ತಿದಾಯಕ. ಅವರ ತತ್ವ ಹಾಗೂ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಾಮಾನ್ಯವಾಗಿ ಕಲಹ, ವಿಭಜನೆಗಳೇ ತುಂಬಿರುವ ಈ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರ ಸಾಮರಸ್ಯ, ಸೌಹಾರ್ದತೆ ಹಾಗೂ ಸಹಿಷ್ಣುತೆಯೇ ಮುಂತಾದ ಜೀವನ ಮೌಲ್ಯಗಳು ಬಹಳ ಸಹಕಾರಿಯೆನಿಸುತ್ತವೆ. ಅವರು ಪ್ರತಿ ಧರ್ಮದ ಮೂಲವೂ ಪ್ರೀತಿ ಮತ್ತು ಸಹಾನುಭೂತಿ ಎಂದು ವಿಶ್ವಕ್ಕೆ ಸಾರಿದ ವ್ಯಕ್ತಿಯಾಗಿದ್ಧಾರೆ. ಅವರು ಯುವಕರಲ್ಲಿ ಬಲಯಾದ ವಿಶ್ವಾಸವನ್ನಿರಿಸಿಕೊಂಡಿದ್ದು ಯುವಜನತೆಯನ್ನು ಸಮಾಜದ ವಾಸ್ತುಶಿಲ್ಪಿಗಳೆಂದೇ ಕರೆಯುತ್ತಿದ್ದರು. ಅವರ ಬೋಧನೆಗಳು ಯುವಸಬಲೀಕರಣವನ್ನು ಪ್ರತಿಬಿಂಬಿಸುತ್ತವೆ. ವೈವಿಧ್ಯತೆಯನ್ನು ಗೌರವಿಸಿ, ತಮ್ಮೊಳಗಿನ ಭಿನ್ನತೆಯನ್ನು ಮರೆತು ಜನಸಾಮಾನ್ಯರ ಉನತನತಿಗಾಗಿ ಯುವಜನರು ಶ್ರಮಿಸಬೇಕು” ಎಂದು ಹೇಳಿದರು.

ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್‌ ರೈ ರವರು “ಸ್ವಾಮಿ ವಿವೇಕಾನಂದರ ಚಿಂತನೆಗಳಾದ ಸಾರ್ವತ್ರಿಕ ಭ್ರಾತೃತ್ವ, ಸರ್ವಧರ್ಮ ಸಮನ್ವಯ ಮುಂತಾದವುಗಳು ಅವರಿಗೆ ಪ್ರಪಂಚದಾದ್ಯಂತ ಗೌರವವನ್ನು ತಂದುಕೊಟ್ಟವು. ಅವರ ಜೀವನವು ಸಂಕ್ಷಿಪ್ತವಾದರೂ ಅವರ ಚಿಂತನೆಗಳು ಅತ್ಯಂತ ಪ್ರಭಾವಶಾಲಿಯಾಗಿವೆ.. ವಿವೇಕಾನಂದರ ಬೋಧನೆಗಳ ಪ್ರಸ್ತುತತೆ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗಿಲ್ಲ. ವಿಭಜನೆ, ಅಸಹಿಷ್ಣುತೆ ಮತ್ತು ತ್ವರಿತ ಬದಲಾವಣೆಯೊಂದಿಗೆ ಹೋರಾಡುತ್ತಿರುವ ಈ ಜಗತ್ತಿನಲ್ಲಿ, ಅವರ ಪ್ರೀತಿ, ನಿರ್ಭಯತೆ ಮತ್ತು ಸೇವೆಯ ಸಂದೇಶವು ಮಾರ್ಗದರ್ಶಿ ಬೆಳಕು. ಅವರ ಜನ್ಮದಿನದಂದು ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸುವುದು ಯುವಕರ ಮೇಲೆ ಅವರು ಹೊಂದಿರುವ ನಿರಂತರ ಪ್ರಭಾವಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿ ಸ್ವಾಮಿ ವಿವೇಕಾನಂದರ ಬೋಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಎಂಕಾಂ ವಿಭಾಗದ ಸಂಯೋಜಕರಾದ ಹರ್ಷಿತ್‌ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶೀತಲ್‌ ಕುಮಾರ್‌ ವಂದಿಸಿದರು. ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರತೀಕ್‌ ರೈ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.