ಬೆಳ್ಮಣ್ಣು: ಇತಿಹಾಸ ಪ್ರಸಿದ್ಧ ಶ್ರೀ ವನದುರ್ಗೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ಬೆಳ್ಮಣ್ಣು ಶ್ರೀ ದುಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ದಿನ ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜೆ ನಡೆಯಿತು. ಪ್ರತಿ ದಿನ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ನವರಾತ್ರಿಯ ಪತ್ರಿ ದಿನ ರಾತ್ರಿ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಪ್ರಸಾದ ನಡೆಯುತ್ತಿದೆ.

ಅಕ್ಟೋಬರ್ 11ರಂದು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಮಹಾನವಮಿ ಪ್ರಯುಕ್ತ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಸಂಗೀತ ಸಂಭ್ರಮ, ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ನವರಾತ್ರಿ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಲಿದೆ. ಅಕ್ಟೋಬರ್ 12ರಂದು ವಿಜಯ ದಶಮಿ ಪ್ರಯುಕ್ತ ಮಧ್ಯಾಹ್ನ ವಿಶೇಷ ಪೂಜೆ ನಡೆಯಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.