ನಿಟ್ಟೆ:  ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನ ವಿರೋಧಿ ಸಮಿತಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೇಂಜರ್ಸ್ & ರೋವರ್ಸ್ ಘಟಕ ಹಾಗೂ ಯೂತ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಕಾರ್ಕಳ ಪೋಲಿಸ್ ಠಾಣೆಯ ಸಹಕಾರದೊಂದಿಗೆ ‘ನಶಾ ಮುಕ್ತ ಭಾರತ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು, ಹಾಗೂ ಈ ಪ್ರಯುಕ್ತ ಬೀದಿ ನಾಟಕ ಮತ್ತು ಜಾಥಾ ಆಯೋಜನೆಯ ಮೂಲಕ ಸಾರ್ವಜನಿಕ ಜಾಗೃತಿಯನ್ನು ಮೂಡಿಸಲಾಯಿತು.

ನಶಾ ಮುಕ್ತ ಭಾರತ ಅಭಿಯಾನದ ಕುರಿತು ಜಾಗೃತಿ  ಮೂಡಿಸಲು ಈ ಕಾರ್ಯಕ್ರಮಕ್ಕೆ ಕಾರ್ಕಳ ಪೋಲೀಸ್ ಠಾಣಾ ಅಧಿಕಾರಿ ಪ್ರಸನ್ನ ಎಂ.ಎಸ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೆರೆದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ  ಪ್ರಸನ್ನ ಎಂ.ಎಸ್ ನಶಾ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಜವಬ್ಧಾರಿ ಹೆಚ್ಚಿದೆ, ಭಾರತದಲ್ಲಿ ದಾಖಲಾಗುವ ಮಾದಕ ವ್ಯಸನ ದೂರುಗಳಲ್ಲಿ ವಿದ್ಯಾರ್ಥಿಗಳ ಸಮೂಹ ದೊಡ್ಡದು ಹಾಗಾಗಿ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದೇ ನಶಾ ಮುಕ್ತ ಭಾರತ ನಿರ್ಮಾಣದ ಮೊದಲ ಮೆಟ್ಟಿಲು ಎಂದು ತಿಳಿಸದರು. ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿಆಗಬೇಕೆ ಹೊರತು ಅದು ದೇಶದ ದೌರ್ಭಲ್ಯವಾಗಬಾರದು. ಹಾಗಾಗಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಉತ್ತಮ ಸಮಾಜದ ಪಾಲುದಾರರಾಗಬೇಕು ಎಂದು ತಿಳಿಸಿದರು. ಇದರ ಜೊತೆಗೆ ಮಾದಕ ದ್ರವ್ಯ ವ್ಯಸನ ಅಪರಾಧಕ್ಕೆ ಇರುವ ಕಾನೂನು ಮತ್ತು ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಮನ ಎಂ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞೆಯನ್ನು ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಿರು ನಾಟಕಗಳ ಮೂಲಕ ಜಾಗೃತಿ ಮೂಡಿಸದರು ಹಾಗೂ ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಕಾರ್ಕಳ ಪೋಲಿಸ್ ಠಾಣಾ ಅಧಿಕಾರಿ  ಪ್ರಸನ್ನ ಎಂ.ಎಸ್ ಅವರೊಂದಿಗೆ ಸಾರ್ವಜನಿಕ ಜಾಗೃತಿಗಾಗಿ ಕಾಲೇಜಿನಿಂದ ನಿಟ್ಟೆ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥವನ್ನು ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಪೋಲಿಸ್ ಠಾಣೆಯ ರುದ್ರೇಶ್, ರೇಂಜರ್ಸ್ & ರೋವರ್ಸ್ ಘಟಕದ ಸಂಯೋಜಕರಾದ ಪ್ರಕಾಶ್, ಯೂತ್ ರೆಡ್ ಕ್ರಾಸ್ ಸೊಸೈಟಿ ಸಂಯೋಜಕಿ ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನ ಅಧಿಕಾರಿ  ನಮಿರಾಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.