ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗ, ಮಹಿಳಾ ವೇದಿಕೆ, ಮತ್ತು ಇನ್ನರ್ ವೀಲ್ ಕ್ಲಬ್, ಮಂಗಳೂರು ಉತ್ತರ ವತಿಯಿಂದ ಇತ್ತೀಚೆಗೆ ಪೋಷಕಾಂಶ ಸಪ್ತಾಹ (ಸೆಪ್ಟೆಂಬರ್ 1-7) ಮತ್ತು ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಆನ್ಲೈನ್ನಲ್ಲಿ ನಡೆದ  ಕಾರ್ಯಕ್ರಮದ ಮುಖ್ಯ ಭಾಗವಾಗಿ ಕಾಲೇಜಿನ ದ್ವಿತೀಯ ಬಿಎಸ್ಸಿಯ ಸೂಕ್ಷ್ಮಾಣುಜೀವಿಶಾಸ್ತ್ರ ವಿದ್ಯಾರ್ಥಿಗಳು ಸಂಗ್ರಹಿಸಿರುವ ತುಳುನಾಡಿನ 100 ಖಾದ್ಯಗಳ ವಿವರಗಳಿರುವ ಸಿಡಿ ಮತ್ತು ಪುಸ್ತಕವನ್ನು ಉಸ್ತುವಾರಿ ಪ್ರಾಂಶುಪಾಲ ಡಾ. ಹರೀಶ್ ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹೈದರಾಬಾದ್ನ ತರುಣಂ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ನರೇಶ್ ರೆಡ್ಡಿ,  ಪೌಷ್ಠಿಕ ಆಹಾರವೆನ್ನುವುದು ಆರೋಗ್ಯ, ವಾತಾವರಣ ಮತ್ತು ನಮ್ಮ ಆರ್ಥಿಕತೆಗೆ ಸಂಬಂಧಪಟ್ಟಿದೆ. ಪೌಷ್ಠಿಕ ಆಹಾರದ ಬಳಕೆಯಿಂದ ನಮ್ಮ ಆರೋಗ್ಯದೊಂದಿಗೆ ರೈತರ, ದೇಶದ ಪರಿಷ್ಥಿತಿಯೂ ಸುಧಾರಿಸುತ್ತದೆ, ಎಂದರು. ಸಂಪನ್ಮೂಲ ವ್ಯಕ್ತಿ ಆಹಾರ ತಜ್ಞೆ ಮಿತ್ರಾ ಪ್ರಭು, ತುಳುನಾಡಿನ ವಿಶಿಷ್ಠ ತಿನಿಸುಗಳಿಗೆ ಪೌಷ್ಠಿಕಾಂಶ ಕೊರತೆಯನ್ನು ನಿವಾರಿಸುವ ಶಕ್ತಿಯಿದೆ. ಭವಿಷ್ಯಕ್ಕಾಗಿ ಇವುಗಳ ದಾಖಲೀಕರಣ ಮಾಡುವ ಅಗತ್ಯವಿದೆ, ಎಂದರು.

ವಿದ್ಯಾರ್ಥಿಗಳಾದ ಭಾರ್ಗವಿ ಆರ್ ನಾಯಕ್ ಮತ್ತು ಪ್ರಣಮ್ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡರು. ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್ ಕಾರ್ಯಕ್ರಮ ಸಂಯೋಜಿಸಿದರು. ವಿಭಾಗದ ಉಪನ್ಯಾಸಕಿ ಸುಮಂಗಲಾ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇನ್ನರ್ ವೀಲ್ ಕ್ಲಬ್ನ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.