ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು ಲವಕುಶ ಜೋಡು ಕರೆ ಕಂಬಳ ಕೂಟವು ಮಾರ್ಚ್ 15 ರಂದು ಶನಿವಾರ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವಾಡಿಕೆಯಂತೆ ಪ್ರತಿವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿದ್ದ ಈ ಕಂಬಳ ಕ್ರೀಡೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು. ಮಾರ್ಚ್ 15ನೇ ತಾರೀಕು ಜಿಲ್ಲೆಯಲ್ಲಿ ಇತರ ಯಾವುದೇ ಕಂಬಳ ಕೂಟ ನಡೆಯದೆ ಇರುವುದರಿಂದ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಸಮಿತಿಯ ನಿರ್ಣಯದಂತೆ ಆ ದಿನದಂದೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಂಬಳ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್ ಅಡ್ಯಂತಾಯ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ವರ್ಷ ಕೂಡ ಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24 ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿಯಿಂದ ನಡೆಯುತ್ತಿದೆ.
ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ ವೀರಪ್ಪ ಮೊಯ್ಲಿ, ಡಾ. ಎಂ ಎನ್ ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಜೊತೆಗೆ ಆನೇಕ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.