ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆಯು ಕಳೆದ ಶನಿವಾರ (ಮಾ.08) ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ನೆರವೇರಿಸಲಾಯಿತು.
ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ. ಆರ್.ಕೆ. ಶೆಟ್ಟಿ ಅವರ ಪ್ರಧಾನ ಪ್ರಾಯೋಜಕತ್ವದಲ್ಲಿ ಖ್ಯಾತ ಉದ್ಯಮಿ ಕೆ.ಡಿ. ಶೆಟ್ಟಿಯವರ ಮಾತೃಶ್ರೀ ದಡ್ಡಂಗಡಿ ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥ ವೇದಿಕೆಯಲ್ಲಿ ಜರಗಿದ ಮಹಿಳಾ ದಿನಾಚರಣೆ ಮತ್ತು ಗೀತಾ ಎಸ್. ಎಂ. ಶೆಟ್ಟಿ ಮಹಿಳಾ ವಸತಿಗೃಹದ ರಜತ ಮಹೋತ್ಸವ ಸಂಭ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತೆ ಸಂಸ್ಥಾನದ ಸಾಧ್ಯ ಮಾತೆ ಶ್ರೀ ಮಾತಾನಂದಮಯಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ತುಳಸೀ ಗಿಡಕ್ಕೆ ನೀರೆರೆದು ಪೂಜೆ, ಆರತಿಯೊಂದಿಗೆ ನಮಸ್ಕರಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಆಶೀವರ್ಚನ ನೀಡಿದರು.
ಮುಖ್ಯ ಅತಿಥಿಯಾಗಿ ಕೈಗಾರಿಕೋದ್ಯಮಿ, ಶಿಕ್ಷಣ ತಜ್ಞೆ, ಸಮಾಜ ಸೇವಕಿ ರಾಖಿ ಶೆಟ್ಟಿ, ಗೌರವ ಅತಿಥಿಯಾಗಿ ಭವಾನಿ ಗ್ರೂಪ್ ಆಫ್ ಕಂಪೆನಿ ನಿರ್ದೇಶಕಿ ಪ್ರಿಯಾಂಕಾ ಜಿಕ್ಷಿತ್ ಶೆಟ್ಟಿ ಉಪಸ್ಥಿತರಿದ್ದು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐ.ಆರ್. ಶೆಟ್ಟಿ, ಕಾರ್ಯದರ್ಶಿ ಆತಾ ಸುಧೀರ್ ಶೆಟ್ಟಿ, ಕೋಶಾಧಿಕಾರಿ ಸುಚಿತಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ವನಿತಾ ವೈ.ನೋಂಡಾ, ಜೊತೆ ಕೋಶಾಧಿಕಾರಿ ಸರೋಜಾ ಬಿ. ಶೆಟ್ಟಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ವರ್ಷದ ಸಾಧಕಿಯರಾದ ಭವಾನಿ ಗ್ರೂಪ್ ಆಫ್ ಕಂಪೆನಿ ನಿರ್ದೇಶಕಿ ಶಿಖಾ ಅಭಿಷೇಕ್ ಶೆಟ್ಟಿ, ಭವಾನಿ ಫೌಂಡೇಶನ್‍ನ ಪ್ರಿಯಾಂಕಾ ಜಿಕ್ಷಿತ್ ಶೆಟ್ಟಿ, ಸಮಾಜ ಸೇವಕಿ ಡಾ| ಶಶಿ ಪ್ರವೀಣ್ ಶೆಟ್ಟಿ, ದಿ.ಇಂಡಿಯಾ ಸೋರ್ಸ್ ಸಹ ಸಂಸ್ಥಾಪಕಿ ಪೂಜಾ ಜಿತೇಶ್ ಶೆಟ್ಟಿ, ವಿನೀತ್ ಪ್ರೆಶಸ್ ಕೆಟಲಿಸಿಸ್ ಪ್ರೈ.ಲಿ. ನಿರ್ದೇಶಕಿ ಅಕ್ಷತಾ ವಿಶ್ವನಾಥ್ ಶೆಟ್ಟಿ, , ಅನುಷ್ಕಾ ಶೆಟ್ಟಿ ಆರ್ಕಿಟೆಕ್ಚರ್ ಸಂಸ್ಥಾಪಕಿ ಮತ್ತು ಪ್ರಾಂಶುಪಾಲೆ ಅನುಷ್ಕಾ ಬಿ. ಶೆಟ್ಟಿ ಇವರನ್ನು ಅಧ್ಯಕ್ಷರು ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪದೊಂದಿಗೆ ಸನ್ಮಾನಿಸಿದರು.
ಇದೇ ಸಂದರ್ಭ ಖ್ಯಾತ ಸಾಹಿತಿ, ಕವಯತ್ರಿ ಡಾ. ಸುನೀತಾ ಶೆಟ್ಟಿಯವರಿಗೆ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ 'ಬಂಟಿ ಶಿರೋಮಣಿ' ಬಿರುದನ್ನು ನೀಡಿ ಪ್ರಶಸ್ತಿ ಪ್ರದಾನಿಸಲಾಯಿತು. ಮಹಿಳಾ ವಿಭಾಗದ ರಜತ ಮಹೋತ್ಸವ ಸಾಧಕಿ 2025 ಪ್ರಶಸ್ತಿಯನ್ನು ಶ್ರೇಷ್ಠ ಸಮಾಜ ಸೇವಕಿ, ಲೇಖಕಿ ಸರಳಾ ಆರ್.ಶೆಟ್ಟಿಯವರಿಗೆ ಪ್ರದಾನಿಸಲಾಯಿತು.
ವಿಶೇಷ ಮಹಿಳಾ ಸಾಧಕಿಯರಾದ ಮಿಸ್ ಮಹಾರಾಷ್ಟ್ರ 2024 ವಿಜೇತೆ ಪ್ರಮಿತಾ ಶೆಟ್ಟಿ, ಕನ್ನಡ ಭವನ ಸಂಸ್ಥೆಯ ಪ್ರಾಂಶುಪಾಲೆ ಅಮೃತಾ ಶೆಟ್ಟಿ, ಸಿಎ| ರಾಜಶ್ರೀ ಶೆಟ್ಟಿ, ಮೇಘಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಮುನ್ನ ಸಂಘದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ವಿಶೇಷ ಪೂಜೆ ಜರಗಿ ಪ್ರಸಾದ ಸ್ವೀಕರಿಸಿದ ಬಳಿಕ ಮಹಿಳೆಯರು ಅತಿಥಿ ಗಣ್ಯರೊಂದಿಗೆ ಭವ್ಯ ಮೆರವಣಿಗೆಯಲ್ಲಿ ತುಳಸೀ ಗಿಡ, ಕಳಸ ಹೊತ್ತು, ಚೆಂಡೆ ವಾದಕ ಮಹಿಳಾ ತಂಡದೊಂದಿಗೆ ಬಂಟರ ಭವನದ ಭನ್ನ ವೇದಿಕೆಗೆ ಆಗಮಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೃಷ್ಟಿ ಎಸ್.ಶೆಟ್ಟಿ ಕಣಜಾರು ಮತ್ತು ಉಷಾ ಶೆಟ್ಟಿ ಇವರಿಂದ 'ತುಳು ವೈಭವ' ಸಾದರಗೊಂಡಿತು. ಮಧ್ಯಗುತ್ತು ಲಾವಣ್ಯ ವಿಶ್ವಾಸ್ ನಿರ್ಮಾಪಕತ್ವದ ಸಾಯಿ ಶಕ್ತಿ ಕಲಾ ಬಳಗ ಮಂಗಳೂರು ಇವರಿಂದ ಜೋಡು ಜೀಟಿಕೆ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಸಂಘದ 9 ಪ್ರಾದೇಶಿಕ ಸಮಿತಿಗಳಿಗಾಗಿ ನೃತ್ಯ ಸ್ಪರ್ಧೆ ಜರಗಿತು.
ಅರುಣಾ ಪ್ರಭಾ ಬಿ. ಶೆಟ್ಟಿ ಪ್ರಾರ್ಥಿಸಿದರು. ಯುವವಿಭಾಗದವರಿಂದ ಶ್ರೀ ಗಣೇಶ ನರ್ತನೆ. ಸುಚಿತಾ ಕೆ. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತಿ ಡಿ.ಶೆಟ್ಟಿ ಡಾ| ಸುನೀತಾ ಶೆಟ್ಟಿ ಅವರನ್ನು ಪರಿಚಯಿಸಿದರು. ಅಕ್ಷತಾ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವನಿತಾ ವೈ. ನೋಂಡಾ ವಂದಿಸಿದರು.