ಮಂಗಳೂರು: ಕೊರೊನಾ ಮಾಹಾಮಾರಿ ವಿರುದ್ಧ ದೇಶದ ಜನತೆ ಜಾತಿ-ಮತ-ಬೇಧ ಮರೆತು ಸಂಘಟಿತರಾಗಿ ಹೋರಾಟ ಮಾಡುವಾಗ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಕೋಮುವಾದದ ವಿಷ ಬಿತ್ತಲು ಹೊರಟಿರುವುದು ಖೇದಕರ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದ್ದಾರೆ.
ಕೊರೋನಾದಿಂದ ಮೃತರಾದ ಹಿಂದೂಗಳ ಶವಗಳನ್ನು ಸಂಸ್ಕಾರ ಮಾಡಲು ಮುಸ್ಲಿಂ ಸಮುದಾಯದ ಸ್ವಯಂ ಸೇವಾ ಸಂಘಟನೆಗಳಿಗೆ ನೀಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಮಾಡಿರುವ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿ ಈ ಹೇಳಿಕೆ ನೀಡಿದ್ದಾರೆ.
ಕೋರೊನಾ ಒಂದು ಸೋಂಕಿನ ವಿರುದ್ಧ ಇಡೀ ದೇಶ ಹೋರಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಕೊರೊನಾ ಮತ್ತು ಕೋಮುವಾದ ಎರಡು ಸೋಂಕಿನ ವಿರುದ್ಧ ಹೋರಾಡುವ ಸನ್ನಿವೇಶವನ್ನು ಇಲ್ಲಿನ ಕೆಲವು ನಾಯಕರು ಸೃಷ್ಟಿ ಮಾಡುತ್ತಿರುವುದು ದೌರ್ಬಾಗ್ಯ. ಆದರೆ ಈ ಜಿಲ್ಲೆಯ ಜನತೆ ತಿಳಿದವರು, ಪ್ರಜ್ಞಾವಂತರು. ಶರಣ್ ಪಂಪ್‌ವೆಲ್ ಅವರ ಕೀಳು ಮನಸ್ಥಿತಿಗೆ ಯಾವತ್ತೂ ಸೊಪ್ಪು ಹಾಕುವವರಲ್ಲ. ಕಳೆದ ವರ್ಷ ಕೊರೊನಾ ಸೋಂಕು ಈ ಜಿಲ್ಲೆಗೆ ಕಾಲಿಟ್ಟ ಸಂದರ್ಭ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಯಾರೂ ನಡೆಸಲು ಮುಂದೆ ಬಾರದಿದ್ದಾಗ ಮೊದಲು ಆ ಕೆಲಸ ಮಾಡಿದ್ದು ಅನ್ಯ ಧರ್ಮದ ಸಂಘಟನೆಗಳು ಎನ್ನುವ ಸತ್ಯವನ್ನು ಪಂಪ್‌ವೆಲ್ ಅರಿತುಕೊಳ್ಳಲಿ. ಇಂತಹ ಸಂಕಷ್ಟ ಕಾಲದಲ್ಲಿ ಪರಸ್ಪರ ನೆರವು ಮಾಡುವುದು ಮಾನವ ಧರ್ಮ ಮತ್ತು ಮಾನವೀಯತೆಯ ಲಕ್ಷಣ. ಮಾನವೀಯತೆಯಿಲ್ಲದವರು ಮಾತ್ರ ಇದರಲ್ಲೂ ಜಾತಿ, ಧರ್ಮ ಕಾಣಲು ಸಾಧ್ಯ ಎಂದು ಹೇಳಿದ್ದಾರೆ.
ಶರಣ್ ಪಂಪ್‌ವೆಲ್ ಇಂತಹ ಕೀಳು ಮನಸ್ಥಿತಿ ಬಿಟ್ಟು ಕೊರೊನಾ ಸಂಕಷ್ಟ ಕಾಲದಲ್ಲಿ ಜಿಲ್ಲೆಗೆ ವೆಂಟಿಲೇಟರ್, ಐಸಿಯು ವ್ಯವಸ್ಥೆ ಮಾಡುವುದಕ್ಕೆ ಹೋರಾಟ ಮಾಡಲಿ. ಕೊರೊನಾ ಸೋಂಕು ನಿರ್ಮೂಲನೆ ಮಾಡಲು ನಾವು ಜಾತಿ-ಧರ್ಮ ಬಿಟ್ಟು ಹೋರಾಡೋಣ. ದೇಶದಿಂದ ಈ ಮಾಹಾಮಾರಿಯನ್ನು ಒದ್ದೋಡಿಸುವಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನಮ್ಮ ಸಹಕಾರ, ಬೆಂಬಲ ಖಂಡಿತಾ ಇದೆ ಎಂದರು.