ಮಂಗಳೂರು: ಇತ್ತೀಚೆಗೆ ಅಗಲಿದ ಹಿರಿಯ ಚೇತನ ಆಸ್ಕರ್ ಫರ್ನಾಂಡಿಸ ಅವರು ತಾಯಿ ಹೃದಯ ಹೊಂದಿದ ಧೀಮಂತ ಮುಖಂಡರಾಗಿದ್ದರು. ಎಂದೂ ಕೂಡ ಕೋಪ ಮಾಡಿಕೊಳ್ಳದೆ ಎಲ್ಲರನ್ನು ಕೂಡ ತಾಯಿ ಮಕ್ಕಳನ್ನು ನೋಡುವಂತೆ ಅವರು ಅಕ್ಕರೆಯಿಂದ ಜನರನ್ನು ನೋಡಿ ಕೊಂಡವರು ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಅತ್ಯಂತ ಸರಳ ಜೀವಿ ಆಗಿರುವ ಆಸ್ಕರ್ ಫರ್ನಾಂಡಿಸ್ ಅವರು ಜಾತಿ, ಧರ್ಮ, ರಾಜಕೀಯ ಬೇಧ ಭಾವ ಇಲ್ಲದೆ ಎಲ್ಲರನ್ನು ಸಮಾನವಾಗಿ ಕಂಡು ಸಹಾಯ ಮಾಡುತ್ತಿದ್ದ ಉನ್ನತ ಮಟ್ಟದ ನಾಯಕರಾಗಿದ್ದರು. ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ದೂರು ದುಮ್ಮಾನಗಳನ್ನು ಹೇಳಲು ದೇಶದ ಮೂಲೆ ಮೂಲೆಗಳಿಂದ ಬರುವ ಪ್ರತಿಯೊಬ್ಬರ ಮಾತುಗಳನ್ನು ಅತ್ಯಂತ ಶಾಂತವಾಗಿ ಆಲಿಸಿ ಅವರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದ ಆಸ್ಕರ್, ತಡರಾತ್ರಿ ತನಕವೂ ಕಚೇರಿಯಲ್ಲಿ ಕೆಲಸ ನಿರತರಾಗುತ್ತಿದ್ದರು. ತನ್ನ ರಾಜಕೀಯ ಜೀವನದಲ್ಲಿ ಆಸ್ಕರ್ ಅವರ ಸಹಾಯವನ್ನು ಎಂದೂ ಮರೆಯಲಾಗುವುದಿಲ್ಲ. ಶಾಸಕ, ಮಂತ್ರಿ ಆಗುವುದಕ್ಕಿಂತಲು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಿರುವುದು ತುಂಬಾ ಸಂತಸವಾಗಿದ್ದು, ತನ್ನ ರಾಜಕೀಯ ಜೀವನದ ಬೆಳವಣಿಗೆಗೆ ಬೆಂಬಲ ನೀಡಿದವರು ಆಸ್ಕರ್ ಎಂದು ರಮಾನಾಥ ರೈ ಸ್ಮರಿಸಿದರು.
ತನಗೆ ಮಂತ್ರಿ ಸ್ಥಾನ ಬೇಡ ಎನ್ನುವವರು ಇಲ್ಲದಿರುವ ಇಂದಿನ ಕಾಲದಲ್ಲಿ ತನಗೆ ಮಂತ್ರಿ ಸ್ಥಾನ ಬೇಡ ಎಂದು ಪಟ್ಟಿಯಿಂದ ಹೆಸರು ತೆಗೆಯಿಸಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೇರಿಸಿದ ಮಹಾನ್ ಮುಖಂಡ ಆಸ್ಕರ್ ಎಂದವರು ಹೇಳಿದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದರು ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರನ್ನೆ ಸೋಲಿಸಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್ ಫರ್ನಾಂಡಿಸ್ ಸರಳ ಸಜ್ಜನ ಮತ್ತು ಆದರ್ಶಪ್ರಾಯರಾದ ರಾಜಕಾರಣಿ ಆಗಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶ ಕಾಲದ ರಾಜಕೀಯ ವಿದ್ಯಮಾನಗಳನ್ನು ಸ್ಮರಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಸ್ಮರಿಸಿ ನಮ್ಮ ಜಿಲ್ಲೆಯವರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಪಕ್ಷದ ಉನ್ನತ ಮಟ್ಟದಲ್ಲೂ ಪ್ರಭಾವ ಶಾಲಿಯಾಗಿದ್ದರು. ಮೂಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿದ್ದರು ಎಂದು ಹೇಳಿದರು.
ಆಸ್ಕರ್ ಫರ್ನಾಂಡಿಸ್ ನೀಡಿರುವ ಸೇವೆಗಾಗಿ ಸ್ಮಾರಕವೊಂದನ್ನು ಸ್ಥಾಪಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ ಅವರು ಆಸ್ಕರ್ ಅವರ ಗಣಗನಾನ ಮಾಡಿದರು. ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ಶೆಟ್ಟಿ, ಬೇಬಿ ಕುಂದರ್, ಡಾ.ರಾಜಾರಾಮ್, ವಿಶ್ವನಾಥ್ ರೈ, ಪ್ರಕಾಶ್ ಸಾಲ್ಯಾನ್, ವೆಲೇರಿಯನ್ ಸಿಕ್ವೇರಾ, ಶೈಲೇಶ್ ಕುಮಾರ್, ಜಿಲ್ಲಾ ಘಟಕಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ಸವಾದ್ ಸುಳ್ಯ, ಮೋಹನ್ ಗೌಡ, ಶಾಹುಲ್ ಹಮೀದ್, ವಿಶ್ವಾಸ್ ದಾಸ್ ಕುಮಾರ್, ಲಾರೆನ್ಸ್ ಡಿಸೋಜಾ, ಜೋಕ್ಕಿಂ ಡಿಸೋಜಾ, ಶುಭೋದಯ ಆಳ್ವ, ಸುದರ್ಶನ್ ಜೈನ್, ಕೌಶಲ್ ಪ್ರಸಾದ್ ಶೆಟ್ಟಿ, ಎಂ.ಎಸ್.ಮೊಹಮ್ಮದ್, ಮಲಾರ್ ಮೋನು, ಟಿ.ಎಸ್.ಅಬ್ದುಲ್ಲಾ, ಬಿ. ಅಬೂಬಕ್ಕರ್ ಕುದ್ರೋಳಿ, ಹಯಾತುಲ್ ಖಾಮೀಲ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ, ಶಶಿಕಲಾ ಪದ್ಮನಾಭ, ಶೋಭಾ ಕೇಶವ್, ಕು.ಅಪ್ಪಿ, ನೀರಜ್ ಚಂದ್ರ ಪಾಲ್, ಸಂತೋಷ್ ಶೆಟ್ಟಿ, ಟಿ.ಕೆ.ಸುಧೀರ್, ಪದ್ಮನಾಭ ಅಮೀನ್, ಟಿ.ಹೊನ್ನಯ್ಯ, ಸಿ.ಎಂ.ಮುಸ್ತಫಾ, ಸಲೀಂ ಪಾಂಡೇಶ್ವರ, ಸಂಜೀವ ಪಾಂಡೇಶ್ವರ, ಸಿದ್ದೀಕ್ ಸರಾವ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರರು.