ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಎಂಬ ಪ್ರಾದೇಶಿಕ ಸಮ್ಮೇಳನ ಮೇ 24ರಂದು ಬೆಳಗ್ಗೆ 9ರಿಂದ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಮಕ್ಕಳ ಆರೋಗ್ಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ನರ್ಸ್ ಗಳ ಕೌಶಲ್ಯವೃದ್ಧಿಗೆ ಈ ಸಮ್ಮೇಳನ ಪೂರಕವಾಗಲಿದೆ ಎಂದು ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನಿರ್ದೇಶಕ ರೇ|ಫಾ| ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.
ಅವರು ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಸಮ್ಮೇಳನದ ಆಮಂತ್ರಣ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಜತೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ನಿರ್ವಹಣೆ, ನವಜಾತ ಶಿಶುಗಳ ಆರೈಕೆ ಮೊದಲಾದ ವಿಚಾರದಲ್ಲಿ ನರ್ಸ್ಗಳ ವೃತ್ತಿಪರತೆಯನ್ನು ಹೆಚ್ಚಿಸಲು ಉಪನ್ಯಾಸ ನೀಡಲಿದ್ದಾರೆ ಎಂದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಅವರು ಪ್ರಸ್ತಾವನೆಗೈದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸಿ| ಜೂಡಿ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ, ಕಾರ್ಯದರ್ಶಿ ಜಾಯ್ಸ್ ಫೆನಾಂಡೀಸ್, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.