ಪೂಂಜಲಕಟ್ಟೆ: ಸರಕಾರಿ ಪಬ್ಲಿಕ್ ಪ್ರೌಢಶಾಲೆ ಪೂಂಜಲಕಟ್ಟೆ ಇಲ್ಲಿ ನನ್ನ ಶಾಲೆ - ನನ್ನ ಕೊಡುಗೆ ಎಂಬ ಕಾರ್ಯಕ್ರಮವು ನಡೆಯಿತು.“ಶಿಕ್ಷಣದ ನಿಜವಾದ ಪರಿಪೂರ್ಣತೆ, ಸಮಾಜಕ್ಕೆ ನಮ್ಮಿಂದ ಕೊಡುಗೆ ನೀಡುವಾಗ ಪ್ರಾರಂಭವಾಗುತ್ತದೆ” ಎಂಬ ಮಾತಿಗೆ ಸಾರ್ಥಕತೆ ತಂದಿರುವುದು ಕೆನರಾ ಪ್ರೌಢಶಾಲೆಯ ಹಿರಿಯ ಚಿತ್ರಕಲಾ ಶಿಕ್ಷಕಿ ರಾಜೇಶ್ವರಿ ಕುಡುಪು ಅವರು.
ನನ್ನ ಶಾಲೆ ನನ್ನ ಕೊಡುಗೆ ಎಂಬ ಸಕಾರಾತ್ಮಕ ಯೋಜನೆಯಡಿಯಲ್ಲಿ, ಅವರು ಪ್ರೌಢಶಾಲಾ ಹಂತದಲ್ಲಿ ವಿದ್ಯಾಭ್ಯಾಸ ಮಾಡಿದ ಸರಕಾರಿ ಪ್ರೌಢಶಾಲೆ ಪೂಂಜಲ ಕಟ್ಟೆಯ ಶಾಲಾ ಮಕ್ಕಳಿಗೆ ಬಹಳ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚಿತ್ರಕಲೆ ಕ್ಷೇತ್ರದಲ್ಲಿ ತಮ್ಮ ಅನುಭವ ಹಾಗೂ ಅಧ್ಯಯನದ ಆಧಾರದ ಮೇಲೆ ಅವರೇ ಸ್ವತಃ ರಚಿಸಿರುವ ಕಲಾಸಂಪದ ಎಂಬ ಚಿತ್ರಕಲೆ ಮಾರ್ಗದರ್ಶಿ ಪುಸ್ತಕವನ್ನು, ಈ ಶಾಲೆಯ 9ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.
ಈ ಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಗ್ರೇಡ್ ಪರೀಕ್ಷೆಗೆ ತರಬೇತಿ ಹೊಂದುವ ರೀತಿಯಲ್ಲಿ ಕಲಿಕೆಯೊಂದಿಗೆ ಕಲಾಪ್ರಪಂಚವನ್ನು ಪರಿಚಯಿಸುವ ಗುರಿಯನ್ನು ಹೊಂದಿದ್ದು, ವಿವಿಧ ಚಿತ್ರಗಳು, ಕಲಾ ಅಭ್ಯಾಸಗಳು, ಆಕರ್ಷಕ ಚಟುವಟಿಕೆಗಳು ಹಾಗೂ ಸ್ಥಳೀಯ ಸಂಸ್ಕೃತಿಯ ಸ್ಪರ್ಶವನ್ನು ಹೊಂದಿದೆ. ಕಲಾಸಂಪದ ಕೃತಿಯು ಮಕ್ಕಳ ಕಲಾತ್ಮಕ ಪ್ರತಿಭೆಗಳನ್ನು ಪ್ರಚೋದನೆ ಮಾಡುವುದು ಮಾತ್ರವಲ್ಲದೆ, ಶಿಕ್ಷಕರಿಗೂ ಮಾರ್ಗದರ್ಶನ ನೀಡುತ್ತದೆ.
ರಾಜೇಶ್ವರಿಯವರು ಮಾತನಾಡಿ ನಾನು ಕಲಿತ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಗೆ ನಾನು ರಚಿಸಿದ 9ನೇ ತರಗತಿಯ ಚಿತ್ರಕಲಾ ಮಾರ್ಗದರ್ಶಿ ಪುಸ್ತಕಗಳನ್ನುಕನ್ನಡ ಮಾಧ್ಯಮದ 114 ಮಕ್ಕಳಿಗೆ ಕೊಡುಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ, ಹಾಗೂ ನನ್ನ ವೃತ್ತಿ ಜೀವನದಲ್ಲಿ ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಆವಿಸ್ಮರಣೀಯ ದಿನವಾಗಿದೆ ಎಂದು ಹೇಳಿದರು.
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಗುರು. ಆ ಜನನಿಗೂ ಪಾಠ ಹೇಳಿದ ಗುರುವೇ ಅರಿವು ಎಲ್ಲಾ ದಾನಕ್ಕೂ ಶ್ರೇಷ್ಠ ವಿದ್ಯಾ ದಾನ ಎನ್ನುವುದನ್ನು ತಿಳಿದ ದೇಶ ನಮ್ಮದು. ಅದು ವಿಶ್ವದ ಕಣ್ಣು. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು.
ನಂಬಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸ್ಪೂರ್ತಿದಾಯಕ ವಾತಾವರಣವನ್ನು, ನನಗೆ ಈ ಶಾಲೆ ನೀಡಿದೆ ಎಂದರು.
ಸರಕಾರಿ ಪಬ್ಲಿಕ್ ಪ್ರೌಢಶಾಲೆ ಪೂಂಜಲ ಕಟ್ಟೆ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ರಾಜೇಶ್ವರಿ ಕೆ ಯವರು ಮಂಗಳೂರಿನ ಡೊಂಗರಕೇರಿಯ ಅನುದಾನಿತ ಕೆನರಾ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸುಮಾರು 32 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಹೊಂಗನಸಿನ ಬಣ್ಣವನ್ನು ತುಂಬಲು ಪ್ರೇರಣೆಯಾಗಿ, ಸಾಕಷ್ಟು ಪ್ರಶಸ್ತಿ ಪುರಸ್ಕಾರ ಗೌರವಗಳಿಗೆ ಭಾಜನರಾಗಿರುವುದು ನಮಗೂ ಹೆಮ್ಮೆ ತರುವ ವಿಚಾರವಾಗಿದೆ ಎಂದು ಶ್ರೀ ಧರಣೇಂದ್ರ ರವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಉಪ ಪ್ರಾಂಶುಪಾಲರು, ಶಾಲಾ ಶಿಕ್ಷಕ ವೃಂದದವರು ಹಾಗೂ ರಾಜೇಶ್ವರಿಯವರ ಸಹೋದರ ಈ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ವಸಂತ್ ಕೇದಿಗೆಯವರು ಮತ್ತು ಬೆಂಗ್ರೆ ಶಾಲೆಯ ಚಿತ್ರಕಲಾ ಶಿಕ್ಷಕರಾದ ಅಂಬಿಕಾ ರವರು ಉಪಸ್ಥಿತರಿದ್ದರು.