ಮಂಗಳೂರು: ಪ್ರಧಾನಿ ಮೋದಿ ತನ್ನದು 56 ಇಂಚಿನ ಎದೆ ಎನ್ನುತ್ತಾರೆ. ಅದರೊಳಗೆ ಮಾನವತೆ ಇಲ್ಲವಲ್ಲ, ಅನ್ನದಾತರು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ ಅದು ಮಿಡಿಯುವುದು ರೈತರಿಗಲ್ಲ, ರೈತರನ್ನು ಸುಲಿಯುವವರಿಗೆ ಎಂದು ಮಾಜೀ ಮುಖ್ಯ ಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯ ಅವರು ಹೇಳಿದರು.
ಮಂಗಳೂರು ಪುರಭವನದಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸಾಹುಲ್ ಹಮೀದ್ ಅವರು ಅಧಿಕಾರ ಸ್ವೀಕರಿಸಿದ ವೇಳೆ ವಿಶೇಷ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಧಾರ್ಮಿಕ ಅಲ್ಪಸಂಖ್ಯಾತರೆಂದರೆ ಕ್ರಿಶ್ಚಿಯನ್, ಮುಸ್ಲಿಂ, ಜೈನ, ಬೌದ್ಧ, ಪಾರಸಿ ಇವರೆಲ್ಲ ಬರುತ್ತಾರೆ. ಹಿಂದೂಗಳು ಬಹುಸಂಖ್ಯಾತರು. ಆದರೆ ಇಂದು ಹಿಂದೂ ಎನ್ನುವವರು ಕೋಮುವಾದಿಗಳು. ಕೋಮುವಾದಿಗಳು ಭಾರತೀಯರಲ್ಲ. ಯಾರು ಕೋಮುವಾದ ಮಾಡಿದರೂ ಅದನ್ನು ಖಂಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಯಾವ ಧರ್ಮವೂ ಪರಧರ್ಮ ದ್ವೇಷ ಹೇಳುವುದಿಲ್ಲ. ಆರೆಸ್ಸೆಸ್, ಬಿಜೆಪಿ ತಮ್ಮ ಸ್ವಾರ್ಥಕ್ಕಾಗಿ ತಪ್ಪು ಮಾಹಿತಿ ನೀಡುವವುದನ್ನು ಪ್ರತಿಭಟಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾವೈಕ್ಯತೆ ಇದ್ದುದರಿಂದ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳು ಅರಳಿದವು. ಸಂಘ ಪರಿವಾರ ಕರಾವಳಿಯನ್ನು ಪ್ರಯೋಗ ಶಾಲೆ ಮಾಡಿಕೊಂಡು ಸೌಹಾರ್ದ ಮುರಿದಿದೆ, ಅಭಿವೃದ್ಧಿ ಮುರಿದಿದೆ. ನಾನು ಮುಖ್ಯ ಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತ ಇಲಾಖೆಗೆ 180 ಕೋಟಿ ರೂಪಾಯಿ ಇದ್ದುದನ್ನು 3,000 ಕೋಟಿಗೆ ಏರಿಸಿದೆ, ಬಿಜೆಪಿ ಬಂದು ಬರಿದಾಗಿಸಿದೆ. ಸಂವಿಧಾನ ನಂಬುವ ಜನ ಅಧಿಕಾರದಲ್ಲಿ ಇದ್ದರೆ ದೇಶ ಗೆಲ್ಲುತ್ತದೆ. ಸಂವಿಧಾನ ನಂಬದ, ಆಗಾಗ ಬದಲಿಸುತ್ತೇವೆ ಎನ್ನುವ ಬಿಜೆಪಿ ಅಧಿಕಾರ ಹಿಡಿದರೆ ದೇಶ ನಾಶ. 1977ರಲ್ಲಿ ಜನತಾ ಹೊಕ್ಕು ಅದು ಬಲ ಪಡೆಯಿತು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣುವುದು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯನವರು ವಿವರಿಸಿದರು. ಮೀಸಲಾತಿ ದುರ್ಬಲರಿಗೆ, ಎಲ್ಲರಿಗೂ ಮೀಸಲಾತಿ ಎಂದರೆ ಅದು ಅಪಚಾರ ಎಂದೂ ಅವರು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಬಿ. ಕೆ. ಹರಿಪ್ರಸಾದ್ ಮಾತನಾಡಿ ಹೋರಾಟ, ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಬಲಿದಾನ ಮಾಡದ ಬಿಜೆಪಿ ದೇಶಪ್ರೇಮದ ಪಾಠ ಮಾಡುವುದು ಬಾಲಿಶ. ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟ ಸಾವರ್ಕರ್ ಇವರಿಗೆ ವೀರ. ಕ್ವಿಟ್ ಇಂಡಿಯಾ ಚಳವಳಿ ವೇಳೆ ಪೋಲೀಸರಿಗೆ ನಾನು ಬರೇ ನೋಡಲು ಹೋಗಿದ್ದೆ ಎಂದು ಮುಚ್ಚಳಿಕೆ ಬರೆದು ಕೊಟ್ಟ ವಾಜಪೇಯಿ ಇವರ ಸ್ವಾತಂತ್ರ್ಯ ಸೇನಾನಿ. ನಾಗಪುರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದ, ನಮ್ಮದು ಕೇಸರಿ ಬಾವುಟ ಎಂದು ಇವರು ಯಾವೂರ ದೇಶಪ್ರೇಮಿಗಳು? ಸ್ವಾತಂತ್ರ್ಯ ಹೋರಾಟದ ವೇಳೆ ಇವರ ಬಲಿದಾನ ಸೊನ್ನೆ ಎಂದು ಹರಿಪ್ರಸಾದ್ ಬಿಜೆಪಿಯನ್ನು ನೇರವಾಗಿ ಖಂಡಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಾಳೆಗೆ ನೀರೆರೆದು ಈ ಭಾವೈಕ್ಯತಾ ಸಮಾವೇಶವನ್ನು ಯು. ಟಿ. ಫರೀದ್ ವೇದಿಕೆಯಲ್ಲಿ ಉದ್ಘಾಟನೆ ಮಾಡಿದರು. ಕೋಮು ಸೌಹಾರ್ದತೆ ಕಾಂಗ್ರೆಸ್ ಪಕ್ಷದ ಹೆಗ್ಗುರುತು. ಯುವಜನಾಂಗ ಯಾವುದೇ ಪ್ರಚೋದನೆಗೆ ಒಳಗಾಗದಿದ್ದರೆ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಸಾಧ್ಯ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿಯವರ ಆಶಯ ಮುಂದುವರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪದಗ್ರಹಣ ಎಂದರೆ ಜವಾಬ್ದಾರಿ ಹೊರುವುದು. ಸಂಘಟನೆ ಮತ್ತು ಸಂಘರ್ಷದ ಮೂಲಕ ಕಾಂಗ್ರೆಸ್ ಮತ್ತೆ ತಳ ಮಟ್ಟದಿಂದ ಮೇಲೇಳಲಿದೆ ಎಂದು ಸಲೀಂ ಹೇಳಿದರು.
ಆರಂಭದಲ್ಲಿ ಸಾಹುಲ್ ಹಮೀದ್ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಳಿಹುಲ್ಲಿನ ಮನೆ, ಬೀಡಿ ಕಟ್ಟುವ ತಾಯಿ, ಕಾಂಗ್ರೆಸ್‌ನ ಬ್ಯಾನರ್ ಕಟ್ಟುತ್ತ, ಹಸ್ತ ಬಿಡಿಸುತ್ತ ಬೆಳೆದವನು. ಈ ಜವಾಬ್ದಾರಿ ನಿಬಾಯಿಸಲು ಕಾಂಗ್ರೆಸ್ ಜೊತೆಗೆ ಇರುವೆ ಎಂದರು. ಕಾರ್ಯಕ್ರಮದ ನಡುವೆ ನಿರ್ಗಮಿಸುವ ಅಧ್ಯಕ್ಷ ಎನ್. ಎಸ್. ಕರೀಂ ಅವರು ಕಾಂಗ್ರೆಸ್ ಧ್ವಜ ಹಸ್ತಾಂತರಿಸುವ ಮೂಲಕ ಸಾಹುಲ್ ಅವರಿಗೆ ಅಧಿಕಾರ ವಹಿಸಿಕೊಟ್ಟರು.
ಮಾಜೀ ಮಂತ್ರಿ ಯು. ಟಿ. ಖಾದರ್ ಮಾತನಾಡಿ ಮುಸ್ಲಿಮರು ಯಾರೂ ಕೋಮುವಾದಿ ಆಗಬೇಡಿ, ಅದರಿಂದ ನಿಮ್ಮ ಸಮುದಾಯಕ್ಕೇ ತೊಂದರೆ ಎಂದರು. ಮಾಜೀ ಮಂತ್ರಿ ರಮಾನಾಥ ರೈ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಮಾಜೀ ಶಾಸಕ ಜೆ. ಆರ್. ಲೋಬೋ ಮೊದಲಾದವರು ಸಂಕ್ಷಿಪ್ತದಲ್ಲಿ ಮಾತು ಮುಗಿಸಿದರು.
ಆಶಯ ನುಡಿ ಆಡಿದ ಬೆಂಗಳೂರಿನ ಆಯಿಶಾ ಫರ್ಜಾನ್ ಶರಣರ ವಚನ, ಕನ್ನಡ ಸಾಹಿತ್ಯ ಮೊದಲಾದವನ್ನು ಉದಾಹರಿಸಿ ಅದ್ಭುತವಾದ ಕನ್ನಡದಲ್ಲಿ ಸೌಹಾರ್ದ ಅಂದರೇನು ಎಂಬುದನ್ನು ಒತ್ತಿ ಹೇಳಿದರು. ಕಾಂಗ್ರೆಸ್‌ನ, ಮಹಾತ್ಮಾ ಗಾಂಧಿಯವರ ಟೀಕಾಕಾರರಾಗಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸಂವಿಧಾನ ರಚಿಸಲು ಆಹ್ವಾನಿಸಿದ್ದು ಅದರ ಬಹುತ್ವವನ್ನು ಎತ್ತಿ ತೋರಿಸುತ್ತದೆ ಎಂದರು.
ಆರಂಭದಲ್ಲಿ ಶಾಲೆಟ್ ಪಿಂಟೋ ತಂಡದಿಂದ ವಂದೇ ಮಾತರಂ, ಹುಸೇನ್ ಕಾಟಿಪಳ್ಳ, ಇಕ್ಬಾಲ್ ಕಾಟಿಪಳ್ಳರಿಂದ ಕಾಂಗ್ರೆಸ್ ಗೀತೆಗಳು ಮೊಳಗಿದವು. ಹಿರಿಯ ಕಾಂಗ್ರೆಸ್ಸಿಗ ಸಯೀದ್ ಅಹಮದ್ ಸಭಾಧ್ಯಕ್ಷತೆ ವಹಿಸಿದ್ದರು. ಹರೀಶ್ ಕುಮಾರ್, ವಸಂತ ಬಂಗೇರ, ಶಕುಂತಲಾ ಶೆಟ್ಟಿ, ಮೊಯ್ದಿನ್ ಬಾವಾ, ಡಾ. ರಘು, ಅಭಯಚಂದ್ರ ಜೈನ್, ಮಮತಾ ಗಟ್ಟಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ರವೂಫ್, ಲುಕ್ಮಾನ್, ಕವಿತಾ ಸನಿಲ್, ವಿಶ್ವಾಸ್ ದಾಸ್, ಇಬ್ರಾಹಿಂ ಕೋಡಿಜಾಲ್, ಮಸೂದ್ ಮೊದಲಾದ ಕಾಂಗ್ರೆಸ್ ನಾಯಕರು ಹಾಜರಿದ್ದರು.