ಉಡುಪಿ,(ಫೆಬ್ರವರಿ 22):  ಜಿಲ್ಲೆಯಲ್ಲಿ ಕೋವಿಡ್ ರೂಪಾಂತರ ವೈರಸ್  ಹರಡದಂತೆ ಮುನ್ನೆಚ್ಚರಿಕೆಯಾಗಿ , ಜಿಲ್ಲೆಗೆ ಕೇರಳ ಮತ್ತು  ಮುಂಬೈಯಿAದ ಬರುವವರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು. ಅವರು ಸೋಮವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ರೂಪಾಂತರಿ ಕೋವಿಡ್  ವೈರಸ್ ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಈ ಹಿಂದೆ ಕೋವಿಡ್ ಚಕಿತ್ಸೆಗೆ ಗುರುತಿಸಿದ್ದ ಆಸ್ಪತ್ರೆಗಳಲ್ಲಿ , ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಹಾಗೂ ಉಪಕರಣಗಳನ್ನು  ಸಿದ್ದ ಮಾಡಿಟ್ಟುಕೊಳ್ಳಿ, ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರ ಕುರಿತಂತೆ ಹೆಚ್ಚು ಜಾಗೃತಿ ಮೂಡಿಸಿ, ಬಾಂಬೆ ಮತ್ತು ಕೇರಳದಿಂದ ಬರುವವರು 72 ಗಂಟೆಗಳ ಮೊದಲು  ಆರ್.ಟಿ.ಪಿ.ಸಿ.ಆರ್  ಪರೀಕ್ಷಾ ವರದಿ ಪಡೆದಿರುವ ಕುರಿತು ಪರಿಶೀಲನೆ ನಡೆಸಿ ಎಂದರು.

    ಜಿಲ್ಲೆಯಲ್ಲಿ ಇದುವರೆಗೆ 359039 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 335501 ನೆಗೆಟಿವ್ ವರದಿ ಬಂದಿದೆ, 23538 ಮಂದಿ ಪಾಸಿಟಿವ್ ಬಂದಿದ್ದು, 189 ಮಂದಿ ಮೃತಪಟ್ಟಿದ್ದಾರೆ, ಇಷ್ಟೊಂದು ಪ್ರಮಾಣದ ಪಾಸಿಟಿವ್ ಇದ್ದರೂ ಸಹ ಜಿಲ್ಲೆಯಲ್ಲಿನ ಮರಣ ಪ್ರಮಾಣ ರಾಜ್ಯದಲ್ಲೇ ಅತ್ಯಂತ ಕಡಿಮೆಯಿದ್ದು ಇದಕ್ಕಾ ಕಾರಣವಾದ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಡಿಸಿ ಜಿ.ಜಗದೀಶ್ ಹೇಳಿದರು.

    ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ 51000 ಮಾನವದಿನಗಳ ಸೃಜನೆಯ ಗುರಿಗೆ 51200 ಸಾಧನೆ ಮಾಡಿರುವುದನ್ನು ಅಭಿನಂದಿಸಿದ ಸಂಸದರು, ಜಿಲ್ಲೆಯಲ್ಲಿ ಹೊಸದಾಗಿ ಆಯ್ಕೆಯದ ಗ್ರಾಮ ಪಂಚಾಯತ್ ಸದಸ್ಯರಿಗೆ ನರೇಗಾದಲ್ಲಿ ಕೈಗೊಳ್ಲಬಹುದಾದ ಕಾರ್ಯಗಳ ಕುರಿತು ವಿವರವಾದ ಮಾಹಿತಿ ನೀಡಿ,. ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ಮತ್ತು ತೋಡುಗಳ ಹೊಳೆತ್ತಲು ಕ್ರಮ ಕೈಗೊಳ್ಳಿ  ಇದರಿಂದ  ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಹಾಗೂ  ನೀರು ಸರಾಗವಾಗಿ ಹರಿದುಹೋಗಲು ಸಆಧ್ಯವಾಗಲಿದೆ ಎಂದರು.

       ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿಲ್ಲ ಹಾಗೂ ಸಾಲ ನೀಡಲು ಅನಗತ್ಯ  ವಿಳಂಬ ಮಾಡುತ್ತಿರುವ   ಬಗ್ಗೆ  ದೂರುಗಳಿವೆ ಆದ್ದರಿಂದ  ಬ್ಯಾಂಕ್ ಗಳಲ್ಲಿ ಸರ್ಕಾರಿ ಯೋಜನೆಯ ಫಲಾನುಭವಿಗಳಿಗೆ ನೀಡಿರುವ ಸಾಲದ ವಿವರಗಳನ್ನು  ನೀಡಿ ಎಂದು ಸಂಸದರು ಲೀಢ್ ಬ್ಯಾಂಕ್ ಮೆನೆಜರ್ ಗೆ ಸೂಚಿಸಿದರು.

    ರಸ್ತೆ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮಳೆಗಲದ ಮೊದಲು ಮುಕ್ತಾಯಗೊಳಿಸುವಂತೆ ಸೂಚಿಸಿದ ಸಂಸದರು, ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಢಬೇಕಾದ ಗ್ರಾಮಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಿ ಎಂದರು.  ಜಿಲ್ಲೆಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಸಕಾಲದಲ್ಲಿ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ಅದರ ಪ್ರಯೋಜನ ದೊರೆಯುವಂತೆ ಕಾರ್ಯ ನಿರ್ವಹಿಸಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.

    ಸಭೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್. ಲಾಲಾಜಿ ಆರ್ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು,  ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್ ಉಪಸ್ಥಿತರಿದ್ದರು.