ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರಿನ ‘ವಿದ್ಯಾರ್ಥಿ ಸಂಘ 2020-21’ ರ ಉದ್ಘಾಟನಾ ಸಮಾರಂಭವು ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ 22ನೇ ಫೆಬ್ರವರಿ ಸೋಮವಾರದಂದು ಸಂಜೆ 5 ಗಂಟೆಗೆ ಆಯೋಜಿಸಲಾಯಿತು.

ನೋಟರಿ ಹಾಗೂ ಫಲಕ ವಕೀಲರು, ಸುಪ್ರಿಂ ಕೋರ್ಟ್, ನವದೆಹಲಿಯ ಶ್ರೀ ರಾಘವೇಂದ್ರ ರಾವ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಗುರಿ ಸಾಧಿಸುವಲ್ಲಿ, ಅಡ್ಡ ಹಾದಿಯನ್ನು ಹಿಡಿಯದೆ ನಿಖರವಾದ ಯೋಜನೆಯನ್ನು ಹೊಂದಿರಬೇಕು. ಇದರ ಜೊತೆಗೆ ತಮ್ಮ ಜೀವನದಲ್ಲಿ ಇತರನ್ನು ಕ್ಷಮಿಸುವವರಾಗಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಯಾವತ್ತೂ ತಕ್ಷಣ ಪ್ರತಿಕ್ರಿಯಿಸುವ ಬದಲು ತಮ್ಮ ಕಾರ್ಯ ವೈಖರಿಯ ಮೂಲಕ ಪ್ರತ್ತ್ಯುತ್ತರ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರೆಪಿಸಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್‍ರವರು ಮುಖ್ಯ ಅತಿಥಿಯಾಗಿ ಮಾತನಾಡಿ, ಯಶಸ್ಸನ್ನು ಗಳಿಸಬೇಕಾದರೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಅಳವಡಿಸಿಕೊಂಡು ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕೆಲಸದ ಒತ್ತಡದ ಮಧ್ಯೆಯೂ ತಮ್ಮ ಸಾಧನೆಯ ಗುರಿ ಮುಟ್ಟುವಲ್ಲಿ ಕಠಿಣ ಶ್ರಮ ಪಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿ ಸಂಘದ ಉಪ ನಿರ್ದೇಶಕರಾದ ಡಾ. ಜಗದೀಶ್ ಬಿ. ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ದೀಪಕ್, ರಂಜಿತ್, ಅರ್ಚನಾ, ನಿತಿನ್, ಲಕ್ಷ್ಮೀ ಉಪಸ್ಥಿತರಿದ್ದರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ವಂದಿಸಿದರು, ಅತಿಥಿ ಉಪನ್ಯಾಸಕಿ ದುರ್ಗಾ ಮೆನನ್ ಕಾರ್ಯಕ್ರಮ ನಿರೂಪಿಸಿದರು.