ಕಾರ್ಕಳ:-  ಸಾಹಿತ್ಯ ಬದುಕಿನ ನೋವು ಸಂಕಟಗಳನ್ನು ಮರೆಸುವ ಸಂಜೀವಿನಿ. ಸಾಹಿತ್ಯಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಸಾಹಿತ್ಯ ನಮ್ಮನ್ನು ಉದ್ದೀಪಿಸುತ್ತದೆ. ಶೋಧನೆಗೆ ಪ್ರೇರೇಪಿಸುತ್ತದೆ. ಮನಸ್ಸಿಗೆ ಆನಂದ ನೀಡುತ್ತದೆ. ಹೀಗೆ ಸಾಹಿತ್ಯ ನಮ್ಮ ಬದುಕಿಗೆ ಶಕ್ತಿಯಾಗಿದೆ ಎಂದು ಸಾಹಿತಿ, ಕವಿ ಅಂಬಾತನಯ ಮುದ್ರಾಡಿ ಪ್ರತಿಪಾದಿಸಿದರು ಕಾರ್ಕಳ ಹೊಸಸಂಜೆ ಪ್ರಕಾಶನ ಪ್ರಕಟಿಸಿದ ನಿವೃತ್ತ ಕನ್ನಡ ಪಂಡಿತ್ ಎಂ. ಬಾಬು ಶೆಟ್ಟಿ ನಾರಾವಿ ಅವರ ಅಂಕಣ ಬರೆಹಗಳ ಸಂಕಲನ "ವಿವೇಕ ಚಾವಡಿ "ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಜ್ಞಾಸು ಸಾಹಿತ್ಯ ರಚನೆಗೆ ಕುಳಿತರೆ ನಿದ್ರೆ ಹಸಿವು ಹೆಂಡತಿ ಮಕ್ಕಳು ಯಾವುದೂ ನೆನಪಾಗದು. ವಾಸ್ತವವಾಗಿ ನೋಡಿದರೆ ಮನಸ್ಸಿಗೆ ಸಾಹಿತ್ಯದಷ್ಟು ಆಪ್ತವಾದ ವಿಷಯ ಬೇರೆ ಇಲ್ಲ. ಸಾಹಿತ್ಯ ಗುರುವೂ ಹೌದು, ಸ್ನೇಹಿತನೂ ಹೌದು, ಪ್ರಿಯತಮ ಎಂಬುದು ನಿಜ. ಸಾಹಿತ್ಯ ಒಂದು ಒಳ್ಳೆಯ ವ್ಯಸನ ಎಂದು ಅಂಬಾತನಯ ಮುದ್ರಾಡಿ ಸಾಹಿತ್ಯದ ಬಗೆಯನ್ನು ವಿವರಿಸಿದರು .

ಕೃತಿಯ ಲೇಖಕ ಎಂ. ಬಾಬು ಶೆಟ್ಟಿ ನಾರಾವಿ ಮಾತನಾಡಿ, ಓದಿನಿಂದ ನಮ್ಮ ಜ್ಞಾನದ ಹರಹು ವಿಸ್ತಾರಗೊಳ್ಳುವುದರ ಜೊತೆ ಸಮಾಜಕ್ಕೆ ಪ್ರೇರಣೆ ನೀಡುವಂತಹ ಮನೋಸ್ಥಿತಿಯು ದೊರಕುತ್ತದೆ. ಕಾಲ್ಪನಿಕ ಬರಹಕ್ಕಿಂತ ನಮ್ಮ ಸುತ್ತಲ ಸಮಾಜದ ಆಗುಹೋಗುಗಳಿಂದ ಉದ್ಭವಿಸುವ ಸಂಕಟಗಳ ಪರಿಹಾರ ಸಾಧ್ಯವಾದರೆ ಓದು ಮತ್ತು ಬರಹಕ್ಕೆ ನ್ಯಾಯ ದೊರಕುತ್ತದೆ ಎಂದರು.

ಡಾ. ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸ ಸಂಜೆ ಪ್ರಕಾಶನದ ಮುಖ್ಯಸ್ಥ ಆರ್. ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ಹಾರಿಸ್ ಹೊಸ್ಮಾರ್ ವಂದಿಸಿದರು.