ಮಂಗಳೂರು:- ಕರಾವಳಿಯಲ್ಲಿ ಮೀನುಗಾರಿಕಾ ಬೋಟುಗಳು ಒಂದು ಸಲ ಕಡಲಿಗೆ ಹೋಗಿ ಬರಲು ಈಗ ಆರು ಲಕ್ಷ ರೂಪಾಯಿಯಷ್ಟು ಇಂಧನ ವೆಚ್ಚ ಮಾಡಬೇಕಾಗಿರುವುದರಿಂದ ನಷ್ಟದ ಭಯದಲ್ಲಿ 70% ಬೋಟುಗಳು ಲಂಗರು ಹಾಕಿ ತಲೆ ಮೇಲೆ ಕೈ ಇಟ್ಟುಕೊಂಡಿವೆ ಎಂದು ದ. ಕ. ಕಾಂಗ್ರೆಸ್ ಅಧ್ಯಕ್ಷ  ಹರೀಶ್ ಕುಮಾರ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಪೆಟ್ರೋಲ್, ಡೀಸೆಲ್‌ ಮತ್ತು ಅಡುಗೆ ಅನಿಲದ ಬೆಲೆ ಭಾರತದ ಇಂದಿನ ದೊಡ್ಡ ಸಮಸ್ಯೆಯಾಗಿದೆ. ಬೋರ್ ವೆಲ್ ರಿಗ್ ಗಳು, ಕೆಲವು ಬಸ್ಸು, ಜೆಸಿಬಿ ಇಂಧನ ಭಾರ ಹೊರಲಾರದೆ ನಿಂತುಬಿಟ್ಟಿವೆ. ಈಗ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಬೆಲೆ ಇದೆ. ಕಾಂಗ್ರೆಸ್ ರಾಜಸ್ತಾನದಲ್ಲಿ ತೆರಿಗೆ  ಇಳಿಸಿ ಬೆಲೆ ಕಡಿಮೆ ಮಾಡಿದೆ. ಈಗ ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ರೂ. 98.64 ಪೈಸೆ ಪೆಟ್ರೋಲ್ ದರ ಇದೆ ಎಂದು ಹರೀಶ್ ಕುಮಾರ್ ತಿಳಿಸಿದರು.

 ಒಂದು ಕಡೆ ಬಿಜೆಪಿ ತಾವು ಹಿಂದಿನ ಕಾಂಗ್ರೆಸ್ ಆಡಳಿತಕ್ಕಿಂತ ಉತ್ತಮ ಸಾಧನೆ ಮಾಡಿರುವುದಾಗಿ ಹೇಳುತ್ತಾರೆ, ಇನ್ನೊಂದು ಕಡೆ ಹಿಂದಿನ ಕಾಂಗ್ರೆಸ್ ಸರಕಾರ ಈಗಿನ ಪೆಟ್ರೋಲ್, ಡೀಸೆಲ್‌, ಗ್ಯಾಸ್ ಬೆಲೆ ಏರಿಕೆಗೆ ಕಾರಣ ಎನ್ನುತ್ತದೆ. ಈ ದ್ವಂದ್ವ ಬಿಟ್ಟು ಕಳೆದ ಏಳು ವರುಷಗಳಿಂದ ಮೋದಿ ಸರಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ಹೇಳಲಿ. ನಾವು ವಿದೇಶೀ ನೇರ ಬಂಡವಾಳ ಹೂಡಿಕೆ 49% ಇಟ್ಟಿದ್ದಾಗ ಬಾಯಿ ಬಡಿದುಕೊಂಡ ಬಿಜೆಪಿ ಜನ ಈಗ 90%ಕ್ಕಿಂತಲೂ ಹೆಚ್ಚು ಎಫ್ ಡಿ ಐಗೆ ಅವಕಾಶ ನೀಡಿ ಜನರನ್ನು ಮೂರ್ಖರಾಗಿಸಿದ್ದಾರೆ  ಎಂದು ಅವರು ತಿಳಿಸಿದರು.

ಬಿಜೆಪಿಯ ಪೆಟ್ರೋಲಿಯಂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಮಾರ್ಚ್ 2ರಂದು ಪ್ರತಿಭಟನೆ ನಡೆಸಲಿದೆ. ಬಾವುಟ ಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಹೋಗಿ ಅಲ್ಲಿ ಪ್ರತಿಭಟನಾ ಸಭೆ ಇರುತ್ತದೆ. ಬಸ್, ರಿಕ್ಷಾ ಮೊದಲಾದವರ ಮತ್ತು ಗ್ಯಾಸ್ ಬೆಲೆಯೇರಿಕೆಯಿಂದ ನೊಂದ ಗೃಹಿಣಿಯರ ಬೆಂಬಲ ಕೋರಿದ್ದೇವೆ. ಹಲವರು ಒಪ್ಪಿದ್ದಾರೆ ಎಂದು ದ. ಕ. ಕಾಂಗ್ರೆಸ್ ಅಧ್ಯಕ್ಷರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಇದ್ದ ಮಾಜೀ ಮಂತ್ರಿ ರಮಾನಾಥ‌ ರೈ ಮಾತನಾಡಿ ನಾವು ಅಧಿಕಾರದಲ್ಲಿ ಇದ್ದಾಗ ಬೆಲೆ ನಿಯಂತ್ರಣದಲ್ಲಿ ಇಟ್ಟಿದ್ದೆವು. ಮೋದಿ ಆಡಳಿತದಲ್ಲಿ ಬೆಲೆ ಆಕಾಶಕ್ಕೆ ಏರಿ ಜನ ಕಂಗಾಲಾಗಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ಲಿಗೆ 140 ಡಾಲರಿಗೆ ಹೋದಾಗಲೂ ನಾವು ಬೆಲೆ ಕಡಿಮೆ ಇಟ್ಟಿದ್ದೆವು. ಈಗ ‌ಕಚ್ಚಾ ತೈಲದ ಬ್ಯಾರೆಲ್ ಬೆಲೆ 40 ಚಿಲ್ಲರೆ ಡಾಲರ್ ಇದೆ, ಬಿಜೆಪಿ ಸರಕಾರ ತನ್ನ ಬರಿದಾದ ಖಜಾನೆ ತುಂಬಿಸಿಕೊಳ್ಳಲು ಹೀಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿದೆ ಎಂದು ರೈ ಹೇಳಿದರು. ಮಾರ್ಚ್ 2ರ ಪ್ರತಿಭಟನೆಗೆ ಸಹಕರಿಸಲು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಸಾಲಿಯಾನ್, ವಿಶ್ವಾಸ್ ದಾಸ್, ಶಶಿಧರ ಹೆಗ್ಡೆ, ರವೂಫ್, ಸಲೀಂ, ಲಾರೆನ್ಸ್‌, ಅಡ್ಯಂತಾಯ ಮೊದಲಾದವರು ಇದ್ದರು.