ಪುತ್ತೂರು: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಮತ್ತು ಕ್ರೀಡೆ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಮುಂದೆ ವೃತ್ತಿ ಜೀವನದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಒಬ್ಬ ಉತ್ತಮ ಮನುಷ್ಯನಾಗಲು ತಾರ್ಕಿಕ ಜ್ಞಾನ, ಸೂಕ್ಷ್ಮತೆ ,ಓದುವ ಮತ್ತು ಬರೆಯುವ ಕೌಶಲ್ಯ, ಸಾಮಾನ್ಯ ಜ್ಞಾನ ಮತ್ತು ಉತ್ತಮ ಸಂವಹನ ಕೌಶಲ ಎಂಬ ಆರು ಅಂಶಗಳನ್ನು ಉಪಯೋಗಿಸಬೇಕು ಎಂದು ಪ್ರಾಂಶುಪಾಲ ವಂದನೀಯ ಡಾ. ಆಂಟನಿ ಪ್ರಕಾಶ್ ಮೋ೦ತೆರೋ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ ‘ನವಾರಂಭ್’ ಬಿಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಮಾನವಿಕ ವಿಭಾಗದ ಮುಖ್ಯಸ್ಥರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಬೇಕು,ನಮ್ಮ ಸ್ನೇಹ ಎಂದಿಗೂ ನಮ್ಮ ಏಳಿಗೆಗೆ ಪೂರಕವಾಗಿರಬೇಕು ಮತ್ತು ಕಲಿಕೆಯೊಂದಿಗೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ನುಡಿದರು.
ವಿದ್ಯಾರ್ಥಿನಿ ಸ್ನೋವಿ ಎಂ ಥಾಮಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ವೈಶಾಲಿವಂದಿಸಿದರು. ವಿದ್ಯಾರ್ಥಿನಿ ಅಝ್ಮಿಯ ಕಾರ್ಯಕ್ರಮ ನಿರೂಪಿಸಿದರು. ಮತ್ತು ವಿದ್ಯಾರ್ಥಿನಿಯರಾದ ಗೌತಮಿ ಎಂ ಮತ್ತು ಫಾರಿಶ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.