ಮಂಗಳೂರು ಏ.20:  ಕರ್ನಾಟಕ ರಾಜ್ಯದಲ್ಲಿ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಏ18 ಮತ್ತು ಏ19 ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಔಟ್‍ಆಫ್ ಸಿಲೆಬಸ್ ಪ್ರಶ್ನೆ ಬಂದಿರುವುದು ಖಂಡನೀಯವಾಗಿದೆ. ಭೌತಶಾಸ್ತ್ರ 10 ಪ್ರಶ್ನೆ, ರಸಾಯನ ಶಾಸ್ತ್ರ 15, ಜೀವಶಾಸ್ತ್ರ– 10, ಗಣಿತ– 11 ಒಟ್ಟು 46 ಪ್ರಶ್ನೆಗಳು ನಿಗದಿತ ಪಠ್ಯದಿಂದಾಚೆಗೆ ನೀಡಲಾಗಿದೆ. ಒಟ್ಟು 3 ಲಕ್ಷದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಿರುತ್ತಾರೆ. ಅದರಲ್ಲಿ 3 ಲಕ್ಷ ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅಂದಾಜಿಸಲಾಗಿದೆ.

ಬಡ ಪ್ರತಿಭಾನ್ವಿತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ.ಪೂ ಕಾಲೇಜಿನ ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಆತಂಕದಲ್ಲಿ ಸರ್ಕಾರ ಇಟ್ಟಿರುವುದು ಖಂಡನೀಯವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕೆಂದು ತಿಳಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇವರು ಮಾಡಿರುವ ತಪ್ಪಿಗೆ ಪರೀಕ್ಷಾ ಪ್ರಾಧಿಕಾರ ಮತ್ತು ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುತ್ತಿರುವುದು ಸರಿಯಾದ ಕ್ರಮವಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 3 ಲಕ್ಷಕ್ಕಿಂತ ಹೆಚ್ಚಿನ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿರುವ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ. ಸುಧಾಕರ ಅವರು ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡದಿರುವುದು ಖಂಡನೀಯವಾಗಿದೆ. ಈ ಕೂಡಲೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಸಿಇಟಿಗೋಸ್ಕರ ತಯಾರಿ ನಡೆಸಿರುವುದರಿಂದ ಅವರಗೊಂದಲ ನಿವಾರಿಸಿ ಅವರಿಗೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಸರಿಯಾದ ನಿರ್ಧಾರವನ್ನು ಪ್ರಕಟಿಸಬೇಕು. ಈ ಎಲ್ಲಾ ಅವಾಂತರಗಳಿಗೆ ಸಂಬಂಧಿಸಿದಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ ರಾಜ್ಯದ ಸಿಇಟಿ ವಿದ್ಯಾರ್ಥಿಗಳಲ್ಲಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಮಂಗಳೂರು ವಿವಿಯ ಸಿಂಡಿಕೇಟಿನ ಮಾಜಿ ಸದಸ್ಯ ರಮೇಶ ಕೆ. ಆಗ್ರಹಿಸಿದ್ದಾರೆ.