ಚಿತ್ರ /ವರದಿ:  ರೋನ್ಸ್ ಬಂಟ್ವಾಳ್

ಮುಂಬಯಿ, ಅ.10:  ಬರಹಗಾರರಲ್ಲಿರುವ ಜ್ಞಾನವು ಅದು ಅವರಲ್ಲೇ ಬತ್ತಿ ಹೋಗಬಾರದು. ಇನ್ನೊಬ್ಬರಿಗೆ ಅದು ಪ್ರಯೋಜನಾಗಬೇಕು. ಹಾಗಾಗಿ ಜನರಲ್ಲಿ ಓದುವ ಜಿಜ್ಞಾಸೆಯನ್ನು  ಬೆಳೆಸಲು ಉತ್ತಮ ಕೃತಿಗಳು ಪ್ರಕಟವಾಗುತ್ತಾ ಇರಬೇಕು. ಕೃತಿಗಳು ಓದುಗರ ಬದುಕಿನಲ್ಲಿ ಉದ್ದಕ್ಕೂ ಅಚ್ಚರಿಯಾಗಿ ಉಳಿದು ಅವರ ಬದುಕು ಇನ್ನಷ್ಟು ಪರಿವರ್ತನೆ ಮಾಡಿಕೊಳ್ಳಲು ನೆರವಾಗಬೇಕು. ಮಸ್ತಕದಿಂದ ಪುಸ್ತಕಕ್ಕೆ ಬರುವ ದಾರಿಯಲ್ಲಿ ನಾನಾ ರೀತಿಯ ಪಲ್ಲಟಗಳು ಕಾಣಿಸಿಕೊಳ್ಳಬಹುದು. ಮಸ್ತಕದಲ್ಲಿ ಇದ್ದದ್ದು ಪುಸ್ತಕದಲ್ಲಿದ್ದುದಕ್ಕೆ ಬೀಳುವಾಗ ತುಂತುರು ಮಳೆಯ ಹನಿಯಂತೆ ಭಾಸವಾಗಬಹುದು.

ಒಂದು ಕೃತಿಯ ಹಿಂದೆ ಪರಿಶ್ರಮ ಇದೆ. ಪ್ರೀತಿ ಪ್ರೇಮ ವಾತ್ಸಲ್ಯ ಬರಹಗಾರರಲ್ಲಿದ್ದಾಗ ಮಾತ್ರ ಉತ್ತಮ ಕೃತಿಗಳು ಹೊರಬರಲು ಸಾಧ್ಯ ಎಂದು ಪ್ರಖ್ಯಾತ ಸಂಘಟಕರು, ಯಕ್ಷಗಾನ ಕಲಾವಿದರು, ಕಾಪೋರೇಟ್  ವ್ಯವಹಾರಗಳ ತಜ್ಞರು, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ  ಶ್ರೀನಿವಾಸ ಪಿ.ಸಾಪಲ್ಯ ಹೇಳಿದರು.

ಅವರು ಮೈಸೂರು ಅಸೋಸಿಯೇಷನ್ ಗ್ರಂಥಾಲಯ ಸಭಾಗೃಹದಲ್ಲಿ ಅಕ್ಟೋಬರ್ 8ರಂದು ಸಂಜೆ ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮಂಡ್ಯದ ಶ್ರೀರಾಮ ಪ್ರಕಾಶನ ಪ್ರಕಟಿಸಿದ 40ನೇ ಕೃತಿ ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ ಹಾಗೂ 41ನೇ ಕೃತಿ ಬೆಂಗಳೂರಿನ ಸಾಹಿತ್ಯ ಸುಗ್ಗಿ ಪ್ರಕಾಶನ ಪ್ರಕಟಿಸಿದ ಎಲ್ಲಿಗೋ ಪಯಣ ಯಾವುದೋ ದಾರಿ ಬಿಡುಗಡೆ ಸಮಾರಂಭದಲ್ಲಿ 40ನೇ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಎಸ್‍ಕೆಬಿ ಅಸೋಸಿಯೇಷನ್   ಧ್ಯಕ್ಷ ಡಾ| ಸುರೇಶ್ ಎಸ್.ರಾವ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

41ನೇ ಕೃತಿ ಯನ್ನು ಬಿಡುಗಡೆಗೊಳಿಸಿದ ಮುಂಬಯಿ  ಹೈಕೋರ್ಟ್ ಅಡ್ವಕೇಟ್ ಆರ್. ಎಂ ಭಂಡಾರಿ ನ್ಯಾಯಾಲಯದಂತಿರುವ ಈ ಗ್ರಂಥಾಲಯದಲ್ಲಿ ಪುಸ್ತಕ ಬಿಡುಗಡೆ ಆಗಿರುವುದು ಸಂತೋಷದ ಸಂಗತಿ. ನಮ್ಮ ಬದುಕೇ ಒಂದು ನ್ಯಾಯಾಲಯ. ಸಿರಿ ಸಂಪತ್ತೇ ಬದುಕಲ್ಲ. ವಿಷಯ ಸಂಗ್ರಹ,  ಪರಿಪಕ್ವತೆ, ಚಾಕಚಕ್ಯತೆ ಹಾಗೂ ಸಾಮಾಜಿಕ ದೃಷ್ಟಿಕೋನವಿದ್ದಾಗ ನಿಖರವಾಗಿ ನೋಡಿ ಅದನ್ನು ಬರಹಕ್ಕಿಳಿಸಲು ಸಾಧ್ಯವಾಗುವುದು. ಜೋಕಟ್ಟೆ ಅವರ ಕೃತಿಗಳು ಅಂತಹ ಆನಂದವನ್ನು ನೀಡುವುದು ಎಂದರು.

40ನೇ ಕೃತಿ ದೇವರುಗಳ ನ್ಯಾಯಾಲಯವನ್ನು ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಡಾ| ಭರತ್ ಕುಮಾರ್ ಪೊಲಿಪು ಅವರು ಪರಿಚಯಿಸಿದರು. 41ನೇ ಕೃತಿ ಎಲ್ಲಿಗೋ ಪಯಣ ಯಾವುದೋ ದಾರಿಯನ್ನು ಯುವ ಲೇಖಕಿ (ಜಿ.ಎಂ ಹೆಗಡೆ ಅವರ ಸಂಪ್ರಬಂಧಕ್ಕೆ ಎಂಫಿಲ್ ಮಾಡಿರುವ ರೂಪಾ ಸಂಗೋಳಿ ಪರಿಚಯಿಸುತ್ತಾ ಪ್ರಥಮ ಬಾರಿಗೆ ಪುಸ್ತಕ ಪರಿಚಯದ ನೆಪದಲ್ಲಿ ವೇದಿಕೆ ಹತ್ತುವ ಅವಕಾಶವೊಂದು ದೊರೆತಿರುವುದಕ್ಕೆ ಖುಷಿ ಪಟ್ಟಿದ್ದೇನೆ. ಈ ಕೃತಿಯು ಒಟ್ಟು 47 ಲೇಖನಗಳನ್ನು ಒಳಗೊಂಡಿದೆ. ಶೀರ್ಷಿಕೆಗಳನ್ನು  ಓದಿದಾಗ ಈ ಸಂಕಲನದ ಲೇಖನಗಳನ್ನು ಹಲವು ವಿಭಾಗಗಳಲ್ಲಿ ವಿಂಗಡಿಸಬಹುದಾಗಿದೆ.

ಡಾ| ಸುರೇಶ್ ಎಸ್.ರಾವ್ ಅವರು ವಹಿಸಿ ಮಾತನಾಡಿದ ಶ್ರೀನಿವಾಸ ಜೋಕಟ್ಟೆ ಅವರ ಕ್ರಿಯಾಶೀಲತೆಯನ್ನು ಕಂಡು ಅವರಿಗೆ ಬಿಎಸ್‍ಕೆಬಿ ಅಸೋಸಿಯೇಷನ್‍ನ ಗೋಕುಲವಾಣಿಯ ಸಂಪಾದಕರ ಜವಾಬ್ದಾರಿಯನ್ನು ನಿಂಜೂರರ ನಂತರ ಕಳೆದ ವರ್ಷ ನಾವು ನೀಡಿದ್ದೇವೆ. ಅವರು ಸಂಪಾದಕನಾಗಿ ಪತ್ರಿಕೆಯನ್ನು ಒಂದು ವರ್ಷದಿಂದ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಯಾರು ಒಳ್ಳೊಳ್ಳೆಯ ಕೆಲಸ ಪುಸ್ತಕಗಳನ್ನು ಓದುತ್ತಾ ಇರಿ. ಜ್ಞಾನ ಬೆಳೆಯುವ ಎಲ್ಲ ಕೆಲಸಗಳನ್ನು ನಾವು ಕೈಗೆತ್ತಿಕೊಂಡಾಗ ಬದುಕಿಗೊಂದು ಅರ್ಥ ದೊರೆಯುವುದು. ನಾವೆಲ್ಲ ಚಿಂತನೆಯನ್ನು ಒಳ್ಳೆಯ ಕೆಲಸಗಳಿಗೆ ವಿನಯೋಗಿಸುತ್ತಾ ಇರಬೇಕು. ಅಲ್ಲಿ ದೇವರ ಅನುಗ್ರಹಗಳು  ದೊರೆಯುವುದು ಎಂದರು.

ಕೃತಿಕಾರ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ತನ್ನ ಬರಹಗಳು ಮೂಡಿ ಬರುವ ಸಂದರ್ಭಗಳನ್ನು ನೆನಪಿಸಿದರು. ಒಂದೊಂದು ಪತ್ರಿಕೆಗಳದ್ದು ಒಂದೊಂದು ಧೋರಣೆ ಇರುತ್ತದೆ. ಅದನ್ನು ಗಮನದಲ್ಲಿರಿಸಿ ಬರಹಗಾರ ಲೇಖನಗಳನ್ನು ಕಳುಹಿಸಬೇಕಾಗುತ್ತದೆ. ನಮಗೆ ಲೇಖನಗಳು ಪ್ರಕಟವಾಗುವುದು ಮುಖ್ಯ. ಪ್ರಕಟವಾದರೆ ಅದು ಜನರನ್ನು ತಲುಪುವುದು ಎಂದರು.

ಜಯಲಕ್ಷ್ಮೀ ಜೋಕಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಟೀಂ ಐಲೇಸಾ ಬೆಂಗಳೂರು ಮತ್ತು ಕರ್ನಾಟಕ ಸಂಘ ಮುಂಬಯಿ ಕಲಾ ಭಾರತಿ ತಂಡದವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಟೀಮ್ ಐ ಲೇಸಾದ ಸೂರಿ ಮಾರ್ನಾಡ್ ಮತ್ತು ಖ್ಯಾತ ಕಂಠದಾನ ಕಲಾವಿದ ರಂಗನಟ ಅವಿನಾಶ್ ಕಾಮತ್ ಮಾಡಿದರು. ಮೋಹನ್ ಮಾರ್ನಾಡ್, ಕೃಪಾ ಪೂಜಾರಿ, ಲತೇಶ್ ಪೂಜಾರಿ, ಸುವಿದ್ ಮಾರ್ನಾಡ್ ಅಕ್ಷರಾ ಕಾಮತ್, ಸ್ವರ ಮಾರ್ನಾಡ್, ರಿಯಾನ್, ಮುಕುಲ್ ಸಹಕರಿಸಿದರು. ಐಲೇಸಾದ ರಮೇಶ್‍ಚಂದ್ರ (ಲಿರಿಕ್ಸ್ ಸೂರಿ ಮಾರ್ನಾಡ್ )ಜ್ಞಾನ ಜ್ಯೋತಿ ಸರಸ್ವತಿ ಚಪ್ಪಾಳೇ ಹಾಡು ಐಲೇಸಾದ ಪ್ರಕಾಶ್ ಪಾವಂಜೆ( ಲಿರಿಕ್ಸ್ ಸೂರಿ ಮಾರ್ನಾಡ್ ) ಪ್ರಸ್ತುತಪಡಿಸಿದರು.