ಮುಂಬಯಿ: ದೀರ್ಘ ಕಾಲದ ಇತಿಹಾಸ ಹೊಂದಿದ  ಕುಲಾಲರ ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನ:ಪ್ರತಿಷ್ಠೆ ಬ್ರಹ್ಮಕಳಶವು  ಮೇ 14ರಿಂದ 25ರ ತನಕ ನಡೆಯಲಿದ್ದು ಈ ಕಾರ್ಯಕ್ಕೆ ಮುಂಬಯಿಗರ ಕೊಡುಗೆ ಅಪಾರ, ಇದು ಕುಲಾಲ ಸಮಾಜದ ಅತೀ ದೊಡ್ಡ ಕಾರ್ಯಕ್ರಮವಾಗಿದ್ದು ಮೇ ತಿಂಗಳ ರಜೆಯ ಸಮಯದಲ್ಲಿ ನಡೆಯುತ್ತಿರುವ ಹತ್ತು ದಿನಗಳ ಉತ್ಸವಕ್ಕೆ ಮುಂಬಯಿಯ ಕುಲಾಲ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿ ಬ್ರಹ್ಮಕಳಶ ಸಮಿತಿಯ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ ವಿನಂತಿಸಿದರು.

ಎ. 16ರಂದು ಸಂಜೆ ಮುಂಬಯಿಯ ಸಂತಾಕ್ರೂಸ್ ಪೂರ್ವ  ಪೇಜಾವರ ಮಠದಲ್ಲಿ  ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರೊಂದಿಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು ದಕ್ಷಿಣ ಕನ್ನಡ ಹಾಗೂ ಪಕ್ಕದ ಜಿಲ್ಲೆಗಳಿಂದ ಭಕ್ತಾಭಿಮಾನಿಗಳು ಆಗಮಿಸಿ 400 ಕ್ಕೂ ಮಿಕ್ಕಿ ಜನರು ಪ್ರತಿದಿನ ಕರಸೇವೆ ಮಾಡುತ್ತಿದ್ದಾರೆ. ಮೇ 14ರಂದು ಕದ್ರಿ ದೇವಸ್ಥಾನದಿಂದ ಹೊರೆಕಾಣಿಕೆ ಹೊರಡಲಿದ್ದು ಐದು ಸಾವಿರಕ್ಕೂ ಮಿಕ್ಕಿ ಭಕ್ತರು ಬಾಗವಹಿಸಲಿದ್ದು, ಈ ಪುಣ್ಯ ಕಾರ್ಯದಲ್ಲಿ  ಪ್ರಖ್ಯಾತ ಸ್ವಾಮಿಗಳು ಆಗಮಿಸಲಿದ್ದಾರೆ ,ಒಟ್ಟು ಈ ಧಾರ್ಮಿಕ ಕಾರ್ಯದಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಸೇರುವ ಸಾದ್ಯತೆಯಿದೆ. ಹತ್ತು  ದಿನಗಳ ಕಾರ್ಯದಲ್ಲಿ ದೇವಸ್ಥಾನಕ್ಕೆ ಬೇಕಾದ ವಿವಿಧ ಸಾಮಾಗ್ರಿಗಳ ಬಗ್ಗೆ ಮುಂಬಯಿ ಸಮಿತಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸುತ್ತಿದ್ದು, ಮುಂಬೈಯ ಭಕ್ತರು ಇದಕ್ಕೆ ಕೈಜೋಡಿಸಬೇಕು ಹಾಗೂ ಆಮಂತ್ರಣ ಪತ್ರಿಕೆಯು ಪ್ರತಿಯೊಬ್ಬರೂ ಸಿಗುವಂತಾಗಲಿ ಎಂದರು.

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಮೂಲ್ಯ ಪಾದೆ್ಬೆಟ್ಟು ಅವರು ಮಾತನಾಡುತ್ತಾ ಮುಂಬಯಿಯ ಸಮಾಜ ಬಾಂಧವರು ಹಾಗೂ ಭಕ್ತರು ಹೊರೆಕಾಣಿಕೆಯ ಸಾಮಾಗ್ರಿಗಳಿಗೆ ಸಹಕರಿಸಬೇಕು. ನಮ್ಮ ಕುಲದೇವರ ಜಾತ್ರೆಗೆ ನಾವೆಲ್ಲರೂ ಅಲ್ಲಿಗೆ ಹೋಗಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕು. ಈ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಸೌಭ್ಯಾಗ್ಯ ಎಂದರು.

ಶ್ರೀ ವೀರನಾರಾಯಣ ದೇವಸ್ಥಾನದ ಪುನ:ಪ್ರತಿಷ್ಠೆ ಬ್ರಹ್ಮಕಳಸದ ಮುಂಬಯಿ ಸಮಿತಿಯ ಅಧ್ಯಕ್ಷರಾದ ಬಿ. ದಿನೇಶ್ ಕುಲಾಲ್ ಮಾತನಾಡುತ್ತಾ ಈ ಶುಭ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ನೆನಪಿಸಿಕೊಂಡರು. ನಮ್ಮ ಸಮಾಜದ ಕುಲ ದೇವರ ಈ ಮಹತ್ಕಾರ್ಯದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು,  ಅಲ್ಲದೆ ಮುಂದೆ ನಮ್ಮ ಸಮಾಜದಲ್ಲಿಯೂ ರಾಜಕೀಯ ಧುರೀಣರನ್ನು ಗುರುತಿಸುವಂತಾಗುವುದು ಎಂದರು.

ಕುಲಾಲ ಸಂಘ ಮುಂಬಯಿಯ ನಿಕಟಪೂರ್ವ ಅಧ್ಯಕ್ಷರಾದ ದೇವದಾಸ ಕುಲಾಲ್ ಮಾತನಾಡುತ್ತಾ ಕಳೆದ  ಮೇ ತಿಂಗಳಲ್ಲಿ ಇದೇ ಸಭಾಗೃಹದಲ್ಲಿ ಮುಂಬಯಿ  ಸಮಿತಿಯನ್ನು ರಚಿಸಲಾಗಿದ್ದು ದೇವರ ಕಾರ್ಯದಲ್ಲಿ ಸೇವೆ ಮಾಡಲು ಸಿಗುವುದು ನಮ್ಮೆಲ್ಲರ ಭಾಗ್ಯ. ಉತ್ತಮ ಮನಸ್ಸಿನಿಂದ ನಾವೆಲ್ಲರೂ ತನು, ಮನ, ಧನ ದೊಂದಿಗೆ ಈ ಪುಣ್ಯ ಕಾರ್ಯದಲ್ಲಿ ಬಾಗಿಯಾಗೋಣ ಎಂದರು. 

ಶ್ರೀ ವೀರನಾರಾಯಣ ದೇವಸ್ಥಾನದ  ಬ್ರಹ್ಮಕಲಸದ ಸಮಿತಿಯ ಗೌರವಾಧ್ಯಕ್ಷರಾದ ಸುನಿಲ್ ಆರ್. ಸಾಲ್ಯಾನ್ ಮಾತನಾಡುತ್ತಾ ನಾವು ದೇವರಿಗೆ ಎಂದೂ ಕೊಡಲು ಸಾಧ್ಯವಿಲ್ಲ, ದೇವರು ನೀಡಿರುವ ಸಂಪತ್ತನ್ನು ದೇವರಿಗೆ ಸಮರ್ಪಿಸುವುದರಲ್ಲಿ ಆನಂದ ಪಡೆಬೇಕು, ಕುಲಾಲ ಸಮಾಜದಲ್ಲಿ ಶ್ರೀಮಂತ ಬಂಧುಗಳಿದ್ದಾರೆ ಅವರೆಲ್ಲರೂ ದಾನ ಮಾಡುವ ಮನಸ್ಸುಗಳನ್ನು ಮಾಡಬೇಕು, ನನ್ನ ಸಾಮಾಜಿಕ ಸೇವಾ ಕಾರ್ಯಗಳಿಗೆ  ದಿನೇಶ್ ಕುಲಾಲ್ ರಂತವರ ಕಾರ್ಯವು ಪ್ರೇರಣೆಯಾಗಿದೆ. ನಮ್ಮ ಸಮಾಜದ ದೇವಸ್ಥಾನವು ಇದೆ ಎಂಬುವುದು ಅಭಿಮಾನದ ವಿಷಯ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಕಾರ್ಯಕ್ಕೆ ಪ್ರೋತ್ಸಾಹಿಸೋಣ, ಎನ್ನುತ್ತಾ ತನ್ನ ಮಾತಾಪಿತರ ಹೆಸರಲ್ಲಿ ಒಂದು ದಿನದ ಅನ್ನ ಸಂತರ್ಪಣೆ ನೀಡುದಾಗಿ ತಿಳಿಸಿದರು.

ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಅವರು ಮಾತನಾಡುತ್ತಾ ಎಲ್ಲಾ ಕಾರ್ಯಕ್ರಮಗಳಿಗೆ ನಾವು ಕೈಜೋಡಿಸೋಣ. ಇದು ನಮ್ಮವರು ಊರಿಗೆ ಹೋಗುವ ಸಮಯವಾಗಿದ್ದು ,ಎಲ್ಲರೂ ಸಾಧ್ಯವಾದ ಸಹಾಯ ಮಾಡಬೇಕು. ಜ್ಯೋತಿ ಕ್ರೆಡಿಟ್ ಸೊಸೈಟಿಯ ವತಿಯಿಂದ ಒಂದು ದಿನದ ಕಾರ್ಯಕ್ರಮವನ್ನು ಪ್ರಾಯೋಜಿಸುವ ಪ್ರಯತ್ನ ನಮ್ಮದು, ನನ್ನ ತಂದೆಯವರು ಈ ಕ್ಷೇತ್ರದ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ನನ್ನ ಕಾಲವಧಿಯಲ್ಲಿ ಈ ದೇವಸ್ಥಾನದ ಬ್ರಹ್ಮಕಳಸವನ್ನು ನೋಡುವ ಭಾಗ್ಯ ದೊರಕಿದೆ. ಮುಂಬೈಯ ಭಕ್ತರಲ್ಲರೂ ಕ್ಷೇತ್ರದ ಈ ಪುಣ್ಯ ಕಾರ್ಯದಲ್ಲಿ ಸೇರಬೇಕು ಎಂದರು ,

ದಾನಿ ಸುರೇಖಾ ಆರ್ ಕುಲಾಲ್ ಮಾತನಾಡುತ್ತಾ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಮ್ಮ ವೈಯಕ್ತಿಕ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಾಗ ನಮ್ಮ ಬದುಕು ಪಾವನವಾಗಲು ಸಾಧ್ಯ, ವೀರನಾರಾಯಣ ದೇವರ ಬ್ರಹ್ಮ ಕಳಶದ ಮೂಲಕ ಸಮಾಜದ  ಅಭಿವೃದ್ಧಿಯ ಕಾರ್ಯಕ್ಕೆ ಕಳಸ ಪ್ರಾಯವಾಗಲಿ ಎಂದು ನುಡಿದರು.

ದೇವಸ್ಥಾನದ ಪುನ: ಪ್ರತಿಷ್ಠೆ ಬ್ರಹ್ಮಕಳಸದ ಪ್ರಧಾನ ಕಾರ್ಯದರ್ಶಿ ಗಿರಿಧರ ಜೆ ಮೂಲ್ಯ ಮಾತನಾಡಿ ಇಲ್ಲಿನ ಭಕ್ತರ ಸಹಾಯ ಎಂದೂ ಮರೆಯುವಂತಿಲ್ಲ. ಈ ಪುಣ್ಯ ಕಾರ್ಯದಲ್ಲಿ ಸ್ವಯಂಸೇವಕರಾಗಿ ಎಲ್ಲಾ ಭಕ್ತರು ಸೇವೆ ಮಾಡಿದಾಗ ಇದು ಅಭೂತಪೂರ್ವ ಯಶಸ್ವಾಗಲು ಸಾಧ್ಯ, ಬ್ರಹ್ಮ ಕಳಸದ  ಆಮಂತ್ರಣ ಪತ್ರಿಕೆ ಪ್ರತಿ ಮನೆಗೂ ತಲಪಲಿ. ಈ ಕಾರ್ಯಕ್ಕೆ ಊರಿಗೆ ಬರುವವರಿಗೆ ಬೇಕಾದ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ ಎಂದರು.

ಮುಂಬಯಿ ಸಮಿತಿಯ ಕಾರ್ಯದರ್ಶಿ ಆನಂದ ಬಿ. ಮೂಲ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೋಶಾಧಿಕಾರಿ ಉಮೇಶ್ ಬಂಗೇರ ಅಬಾರ ಮನ್ನಿಸಿದರು. ಹೊರೆಕಾಣಿಕೆ ಮನವಿ ಪತ್ರ ವನ್ನು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಿಗೂ ಒಂದು ದಿನದ ಕಾರ್ಯಕ್ರಮವನ್ನು ಪ್ರಾಯೋಜಿಸುವ ಮನವಿಯನ್ನು ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಿಗೂ ಹಸ್ತಾಂತರಿಸಿದರು.

ಕುಲಾಲ ಸಂಘದ ಉಪಾಧ್ಯಕ್ಷ ಡಿಐ ಮುಲ್ಯ ,ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಅಂಚನ್, ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ್ ಮೂಲ್ಯ,  ಕುಲಾಲ ಸಂಘದ ಥಾನೇ- ಕರ್ಜತ್ ಸ್ಥಳಿಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ ಮೂಲ್ಯ, ಕುಲಾಲ ಸಂಘದ ಸಿ ಎಸ್ ಟಿ -  ಮುಲುಂಡ್ ಸ್ಥಳಿಯ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಬಂಗೇರ, ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಮುಂಡ್ಕೂರು ಅಧ್ಯಕ್ಷರಾದ ಹರೀಶ್ ಮೂಲ್ಯ , ಸಂಚಾಲಕ ಕೃಷ್ಣ ಮೂಲ್ಯ ತಮ್ಮ ಅಮಿಪ್ರಾಯಗಳನ್ನು ತಿಳಿಸಿದರು . 

ಕಾರ್ಯಕ್ರಮದ ಯಶಸ್ವಿಗೆ ಮುಂಬೈ ಸಮಿತಿಯ ಸದಸ್ಯರುಗಳಾದ ಕರುಣಾಕರ್ ಸಾಲ್ಯಾನ್ , ಜಯ ಅಂಚನ್ ಗೋಪಾಲ್ ಬಂಗೇರ ಸುಂದರ್ ಮೂಲ್ಯ ಸಯನ್, ದಯಾನಂದ ಮೂಲ್ಯ ಕುಕ್ಕೆಹಳ್ಳಿ,  ಎಲ್ ಆರ್ ಮೂಲ್ಯ , ವಾಮನ್ ಅಮೂಲ್ಯ ಅದ್ಯಪಾಡಿ ,ಕೃಷ್ಣ ಬಂಗೇರ ದೊಂಬಿವ ಲಿ, ಯೋಗೀಶ್ ಬಂಗೇರ  ಸಂತಾಕ್ರೂಸ್ , ಪುಷ್ಪಲತಾ  ಸಾಲ್ಯಾನ್, ಸುರೇಖಾ ಬಂಗೇರ, ರಸಿಕ ಮೂಲ್ಯ, ಸುಜಾತ ಸಾಲ್ಯಾನ್,  ಪ್ರೇಮಾ ಕುಲಾಲ್, ರೇಣುಕಾ ಸಾಲ್ಯಾನ್, ಸುನಂದ  ಬಂಗೇರ, ದೇವಕಿ ಸಾಲ್ಯಾನ್ ಮೊದಲಾದವರು ಸಹಕರಿಸಿದರು.