ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನದ ಮತ್ತು ಉಡುಪಿ ಜಿಲ್ಲೆಯ ಮಣಿಪಾಲ, ಕಾರ್ಕಳ, ಶಿವಮೊಗ್ಗ ಜಿಲ್ಲೆಯ ಅಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿ ಆತನಿಂದ ಮನೆ ಕಳ್ಳತನ ಮಾಡಿ ಕಳವು ಮಾಡಿದ ಸುಮಾರು ರೂ 15,00,000/-ಮೌಲ್ಯದ 270 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹೀರೋ ಹೋಂಡಾ ಸ್ಟೇಂಡರ್ ಪ್ಲಸ್ ಮೋಟಾರ್ ಸೈಕಲ್ ಹಾಗೂ 2 ಮೊಬೈಲ್ ಫೋನ್ ಗಳನ್ನು ಸ್ವಾಧಿನಪಡಿಸಿಕೊಂಡಿರುತ್ತಾರೆ.

ಆರೋಪಿಯ ವಿವರ:-

ಸಿದ್ಧರಾಜು @ ಮೂರ್ತಿ @ ಸೋನು ರಾಜ್ ಸುಂದರ್ ರಾಜ್ @ ಸಿದ್ಧ @ ರೌಡಿ ಸಿದ್ಧ @ ಸಿದ್ದು D ಜ್ಞಾನಮೂರ್ತಿ ಪ್ರಾಯ:52

ವಿಳಾಸ: ಮಾರಿಗುಡಿ ದೇವಸ್ಥಾನ ರಸ್ತೆ, ಹೂಟಗಳ್ಳಿ, ಮೈಸೂರು, ಹಾಲಿ ವಾಸ: ಚಿಕ್ಕಬಾಣಾವರ, ಬೆಂಗಳೂರು, ಖಾಯಂ

ವಿಳಾಸ- ಹರಿಜನ ಕಾಲೋನಿ, ಅಂಬೇಡ್ಕರ್ ಜ್ಞಾನ ಲೋಕ, ಮೇಟಗಳ್ಳಿ, ಮೈಸೂರು ನಗರ.

ಆರೋಪಿತನು ಮಂಗಳೂರು ನಗರ, ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳ ಪೊಲೀಸ್ ಠಾಣೆಯ ಒಟ್ಟು 02 ಪ್ರಕರಣಗಳು, ಶಿವಮೊಗ್ಗ ಜಿಲ್ಲೆ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು - ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ 02 ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿದ್ದು ಮಂಗಳೂರಿನಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ 01 ಮನೆ ಕಳ್ಳತನ ಮಾಡಿದ್ದು ಒಟ್ಟು-13 ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಲು ಬಂದ ಸಮಯ ಆರೋಪಿತನನ್ನು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ ಸಮಯ ಆರೋಪಿತನು ಆತನ ಸಹಚರನಾದ ಹಾಸನ ಜಿಲ್ಲೆಯ ಅರಕೂಲಗೂಡಿನ ಪುನೀತ್ ಎಂಬಾತನೊಂದಿಗೆ ಸೇರಿಕೊಂಡು ಹಲವಾರು ಕಡೆ ಯಾರೂ ಇಲ್ಲದ ಮನೆಯ ಬೀಗ ಒಡೆದು ಚಿನ್ನಾಭರಣಗಳನ್ನು ಕಳವು ಮಾಡಿರುತ್ತಾನೆ. ಈತನು ಕಳವು ಮಾಡಿದ ಮನೆಯ ಕಳ್ಳತನ ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಅರೋಪಿತನು ಮೈಸೂರು ನಗರ ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2005 ನೇ ಇಸವಿಯಲ್ಲಿ ಗಂಗಮ್ಮ ಎಂಬ ಮಹಿಳೆಯ ಕೊಲೆ ಮಾಡಿದ ಪ್ರಕರಣದಲ್ಲಿ ಅರೋಪಿಯಾಗಿದ್ದು ಈತನು ಮೈಸೂರಿನ ಮಂಟೆಲಿಂಗಯ್ಯ ಮತ್ತು ಇತರ ಆರೋಪಿಗಳೊಂದಿಗೆ ಸೇರಿಕೊಂಡು ಗಂಗಮ್ಮನವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕಬಿನಿ ನದಿಗೆ ಬಿಸಾಡಿದ್ದು ಈ ಪ್ರಕರಣ ದಾಖಲಾದ ಸಮಯ ಆತನ ಹೆಸರು ರೌಡಿ ಸಿದ್ದ ಎಂಬುದಾಗಿ ಇದ್ದು, ಈತನು ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ 2006 ನೇ ಇಸವಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು ಈವರೆಗೆ ಪತ್ತೆಯಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಎಲ್,ಪಿಸಿ ದಸ್ತಗಿರಿ ವಾರಂಟ್ ಇರುತ್ತದೆ. ಕೊಲೆ ಪ್ರಕರಣದಲ್ಲಿ ಈತನೊಂದಿಗೆ ಇದ್ದ ಇತರ ಆರೋಪಿಗಳಿಗೆ ಮಾನ್ಯ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ.

ಆರೋಪಿತನು ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಠಾಣೆ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಪೊಲೀಸರಿಂದ ದಸ್ತಗಿರಿಯಾಗಿದ್ದು ಜಾಮೀನಿನಲ್ಲಿ ಬಿಡುಗಡೆ ಹೊಂದಿರುತ್ತಾನೆ.

ಆರೋಪಿತನ ವಿರುದ್ಧ ಮೈಸೂರು ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ನಜರ್ ಬಾದ್ ಮತ್ತು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ಮತ್ತು ಮನೆ ಕಳ್ಳತನ, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣದ ವಿಜಯ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ಮತ್ತು ಕಳವು ಪ್ರಕರಣ ದಾಖಲಾಗಿದ್ದು ಈತನ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ 'ರೌಡಿ ಶೀಟ್' ತೆರೆಯಲಾಗಿರುತ್ತದೆ. ಈತನು ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಬಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಕಸ್ಪಡಿ ಎಸ್ಕೆಪ್‌ ಪ್ರಕರಣ ದಾಖಲಾಗಿರುತ್ತದೆ.

ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಆರೋಪಿತನು ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ತಲೆಮರೆಸಿಕೊಂಡಿರುವ ಆರೋಪಿ ಎಂದು ಒಟ್ಟು-12 ಎಲ್,ಪಿಸಿ ವಾರಂಟ್ ಇರುತ್ತದೆ. ಆರೋಪಿತನ ವಿರುದ್ಧ ಈವರೆಗೆ ದಾಖಲಾದ ಪ್ರಕರಣಗಳ ವಿವರ

ಮಂಗಳೂರು ನಗರದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು-01 ಪ್ರಕರಣ ಹಾಗೂ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ 10 ಠಾಣೆಗಳಲ್ಲಿ ಕೊಲೆ, ಅತ್ಯಾಚಾರ, ಕೊಲೆ ಯತ್ನ ಹಾಗೂ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು 14 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 3 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು-03 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯಲ್ಲಿ 4 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು-08 ಪ್ರಕರಣಗಳು, ಹಾಸನ ಜಿಲ್ಲೆಯಲ್ಲಿ 2 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು-02 ಪ್ರಕರಣಗಳು ಸೇರಿ ಒಟ್ಟು 30 ಪ್ರಕರಣಗಳು ದಾಖಲಾಗಿರುತ್ತವೆ.

ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಸಹಾಯಕ ಪೊಲೀಸ್‌ ಆಯುಕ್ತರಾದ ಪಿ ಎ ಹೆಗಡೆ ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ ಹಾಗೂ ಪಿಎಸ್‌ಐಯವರಾದ ಸುದೀಪ್ ಎಂ ವಿ ಮತ್ತು ಎ.ಎಸ್.ಐ ಶಶಿಧರ ಶೆಟ್ಟಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.