ಮುಂಬಯಿ, ಆ.20: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್‍ನ್ಯಾಷನಲ್ (ಐಸಿಎಸ್) ವತಿಯಿಂದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಹಾನರರಿ ಫೆಲೋಶಿಪ್ (ಗೌ| ಎಫ್‍ಐಸಿಎಸ್) ಅನ್ನು ಪ್ರದಾನ ಮಾಡಲಾಗಿದೆ.
ಟೋನಿ ಲೀ ಕಿಮ್ ಥುವಾನ್ ಎಪಿಎಸ್‍ಎ, ಗೌ| ಇಎಫ್‍ಐಎಪಿ, ಸಾರಾ ತೈ ಮೇ ಲಿನ್ ಎಆರ್‍ಪಿಎಸ್ ಹಾಗೂ ಕಾಲಿಗ್ ಸೊಸೈಟಿ ಇಂಟರ್‍ನ್ಯಾಷನಲ್ ಗೌರವ ಸಮಿತಿ ಅವರ ನೇತೃತ್ವದಲ್ಲಿ ನೀಡಲಾದ ಈ ಪ್ರಶಸ್ತಿ, ಛಾಯಾಗ್ರಹಣ ಕಲೆ ಹಾಗೂ ಸಂಸ್ಕೃತಿಯ ಅಭಿವೃದ್ದಿಗೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಆಸ್ಟ್ರೋ ಮೋಹನ್ ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸುತ್ತಿದೆ.
ಉದಯವಾಣಿ ಕನ್ನಡ ದಿನಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿರುವ ಆಸ್ಟ್ರೋ ಮೋಹನ್, 1994ರಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಅವರ ವಿಶಿಷ್ಟ ಪ್ರಯೋಗಶೀಲತೆ ಮತ್ತು ನವೀನ ದೃಷ್ಟಿಕೋನದಿಂದ ಗಮನ ಸೆಳೆದಿದ್ದಾರೆ. ಇಂದಿನವರೆಗೆ ಅವರು 850 ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವವು ಜುವೆಲ್ಸ್ ಸರ್ಕ್ಯೂಟ್ 2025 ಅಂತಾರಾಷ್ಟ್ರೀಯ ಫೋಟೋ ಸ್ಪರ್ಧೆಯಲ್ಲಿ ಗ್ರಾನ್ ಪ್ರಿಕ್ಸ್ ಝಾಫಿರಿ ಚಿನ್ನದ ಪದಕ, ಅನೇಕ ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಎಫ್‍ಐಎಪಿ ರಿಬನ್ ಹಾಗೂ ಜೂರಿ ಪ್ರಶಸ್ತಿ, ಆಂಧ್ರಪ್ರದೇಶ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ಸಮರ್ ಫೋಟೋ ಅವಾರ್ಡ್ಸ್ 2025.
2021ರಲ್ಲಿ, ಅವರು ಅಮೆರಿಕಾದ ಫೋಟೋಗ್ರಾಫಿಕ್ ಸೊಸೈಟಿ (ಪಿಎಸ್‍ಎ)ಯ ಅಸೋಸಿಯೇಟ್‍ಷಿಪ್ (ಎಪಿಎಸ್‍ಎ) ಗೌರವ ಪಡೆದರು. ಪ್ರಸ್ತುತ ಅವರು PSA ಯ ಭಾರತದ ಅಸಿಸ್ಟೆಂಟ್ ಕಂಟ್ರಿ ಮೆಂಬರ್ಷಿಪ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕ್ಯಾನನ್ ಇಔS ಮೈಸ್ಟ್ರೋ ಆಗಿಯೂ ಕಾರ್ಯನಿರ್ವಹಿಸುತ್ತಿ ದ್ದು, ಇಡೀ ಭಾರತದೆಲ್ಲೆಡೆ 20ಕ್ಕೂ ಹೆಚ್ಚು ವರ್ಷಗಳಿಂದ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ.
ಪತ್ರಿಕೋದ್ಯಮದಾಚೆಗೆ, ಆಸ್ಟ್ರೋ ಮೋಹನ್ ಒಬ್ಬ ಲೇಖಕ, ಸಂಸ್ಕೃತಿ ಸಂರಕ್ಷಕ ಹಾಗೂ ಆಲೋಚಕ ಆಗಿ ಖ್ಯಾತಿ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ಏ ಡೇ ವಿತ್ ದಿ ಸೇಂಟ್, ಚಿತ್ರಮಯ ಉಡುಪಿ, ಪಿಕ್ಟೋರಿಯಲ್ ಜರ್ನಿ ಟು ಉಡುಪಿ, ಉಡುಪಿ-ಮಣಿಪಾಲ ದೆನ್ ಅಂಡ್ ನೌ ಹಾಗೂ ಇತ್ತೀಚೆಗೆ ಫೆಬ್ರವರಿ 2025ರಲ್ಲಿ ಬಿಡುಗಡೆಯಾದ ಉಡುಪಿ ದೆನ್ ಅಂಡ್ ನೌ ಒಳಗೊಂಡಿವೆ.
ಉಡುಪಿಯ ಸಂಸ್ಕೃತಿಯೊಂದಿಗೆ ಆಳವಾಗಿ ನಂಟು ಬೆಸೆದುಕೊಂಡಿರುವ ಮೋಹನ್, ತಮ್ಮ ಛಾಯಾಚಿತ್ರಗ ಳ ಮೂಲಕ ಪರಂಪರೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.