ಪುತ್ತೂರು, ಜೂನ್, 04: ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಘಟಕಗಳ ಪ್ರತಿನಿಧಿಗಳು ಎನ್‍ಡಿಆರ್‍ಎಫ್. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಭೇಟಿಯನ್ನು ಪುತ್ತೂರಿನ APMC ರೈತ ಭವನದಲ್ಲಿ ನಡೆಸಿದರು. ಎನ್‍ಡಿಆರ್‍ಎಫ್‍ ಇನ್ಸ್ ಪೆಕ್ಟರ್   ಶಾಂತಿಲಾಲ್‍ ಜಟಿಯಾರವರು ಮಾತನಾಡಿ“ವಿಪತ್ತು ನಿರ್ವಹಣೆಯ ಕಾರ್ಯಾಚರಣೆಗೆ ಸನ್ನದ್ಧರಾಗಿ ಬಂದಿರುವಂತಹ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರು ತಮ್ಮಊರಿನಲ್ಲಿ ಸ್ವಯಂ ಪ್ರೇರಿತರಾಗಿ ಸೇವಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂತಹ ಸೇವಾ ಮನೋಭಾವನೆ ಹೊಂದಿದ ತಂಡ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ, ಶೌರ್ಯ ತಂಡವು ಕರ್ನಾಟಕ ರಾಜ್ಯದ ವರದಾನವಾಗಿದೆ. ಮಂಗಳೂರು ಉಳ್ಳಾಲದಲ್ಲಿ ನಡೆದ ಗುಡ್ಡ ಕುಸಿತ ಸಂದರ್ಭಗಳಲ್ಲಿ NDRF ತಂಡದ ಜತೆಗೆ ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಯಾವುದೇ ರೀತಿಯ ವಿಪತ್ತು ಸಂಭವಿಸಿದ್ದಲ್ಲಿ NDRF ತಂಡದ ಜತೆ ಶೌರ್ಯ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದಾರೆ ಎನ್ನುವುದು ಖುಷಿಯ ಸಂಗತಿ. ಮತ್ತು ದೇಶದಲ್ಲಿ ಸೈನಿಕರು ಉಗ್ರರ ವಿರುದ್ಧ ಹೋರಾಡಿದರೆ, ಶೌರ್ಯ ಸ್ವಯಂ ಸೇವಕರು ವಿಪತ್ತಿನ ವಿರುದ್ಧ ಹೋರಾಡುತ್ತಿದ್ದಾರೆ. ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಕಾರ್ಯಾಚರಣೆಯಲ್ಲಿಯೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಭಾಗವಹಿಸಿ ಎನ್‍ಡಿಆರ್‍ಎಫ್‍ ತಂಡದೊಂದಿಗೆ ನೆರವಾಗಿದೆ. ಜನಸೇವೆ ಮಾಡುವ ಈ ತಂಡವನ್ನು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿರುವುದು ಸಮಾಜಕ್ಕೆ ನೀಡಿದ ಒಂದು ಅತ್ಯದ್ಭುತ ಕೊಡುಗೆಯಾಗಿದೆ. ಆಪರೇಷನ್ ಸಿಂಧೂರ ಮುಗಿದಿದೆ ಆದರೆ ಶೌರ್ಯ ತಂಡದ ಕಾರ್ಯಾಚರಣೆ ಅದು ಮುಗಿಯುವಂತದ್ದಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿ ಪಾಯಸ್‍ರವರು ಮಾತನಾಡಿ ರಾಜ್ಯದ 91 ತಾಲೂಕಿನಲ್ಲಿ 10000ಕ್ಕೂ ಮಿಕ್ಕಿದ ಶೌರ್ಯ ಸ್ವಯಂ ಸೇವಕರು ವಿಪತ್ತಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ವಿಶೇಷವಾಗಿ ಶೌರ್ಯ ತಂಡಗಳಿಗೆ NDRF ಪಡೆಯಿಂದ ತರಬೇತಿಯನ್ನು ನೀಡಲಾಗುತ್ತದೆ. ಎನ್‍ಡಿಆರ್‍ಎಫ್‍ ಇನ್ಸ್ ಪೆಕ್ಟರ್  ಶಾಂತಿಲಾಲ್‍ ಜಟಿಯಾರವರು ಶ್ರೀ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸುಮಾರು 2000 ಮಂದಿಗೆ ಈಗಾಗಲೇ ಪ್ರಥಮಚಿಕಿತ್ಸೆ ಮತ್ತು ತುರ್ತು ಕಾರ್ಯಾಚರಣೆಯ ತರಬೇತಿ ನೀಡಿದ ಅಧಿಕಾರಿಯಾಗಿರುತ್ತಾರೆ. ಈ ವರ್ಷದ ಮಳೆಗಾಲದಲ್ಲಿ ಸಂಭವಿಸಬಹುದಾದ ಆಪತ್ತಿನ ಸಂಧರ್ಭದಲ್ಲಿ ನಮ್ಮ ಸ್ವಯಂಸೇವಕರು ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಮತ್ತು NDRF ಪಡೆಯ ವಿಪತ್ತಿನ ಕಾರ್ಯಾಚರಣೆಯಲ್ಲಿ ಶೌರ್ಯ ಸ್ವಯಂ ಸೇವಕರನ್ನು ಕೂಡ ಬಳಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ.ಬಿ.ಸಿಟ್ರಸ್ಟ್(ರಿ.)ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ  ಅನಿಲ್ ಕುಮಾರ್‍ ಎಸ್.ಎಸ್. ರವರು ನೀಡಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾಸ್ವಯಂ ಸೇವಕರನ್ನು ಬಳಸಿಕೊಳ್ಳುವ ಕುರಿತಾದ ಮನವಿ ಮತ್ತು ಮಾಹಿತಿ ಪತ್ರವನ್ನು NDRF ಮುಖ್ಯಸ್ಥರಿಗೆ ನೀಡಲಾಯಿತು.

ಈ ಬಾರಿ ಪುತ್ತೂರು, ಉಡುಪಿ, ಅಂಕೋಲ, ಮಡಿಕೇರಿಯಲ್ಲಿ ಪ್ರವಾಹದ ಮುಂಚಿತವಾಗಿಯೇ ಎನ್‍ಡಿಆರ್‍ಎಫ್‍ ತಂಡದ 100 ಯೋಧರು ಬೇರೆ ಬೇರೆ ಕಡೆಗಳಲ್ಲಿ ಸನ್ನದ್ಧರಾಗಿ ನಿಂತಿದ್ದಾರೆ. ಪುತ್ತೂರಿನ ನಾಯಕತ್ವವನ್ನು ಇನ್ಸ್‍ಪೆಕ್ಟರ್  ಶಾಂತಿಲಾಲ್‍ ಜಟಿಯಾ, ಉಡುಪಿಯಲ್ಲಿ ಇನ್ಸ್‍ಪೆಕ್ಟರ್  ರಾಜೇಂದ್ರ ಕುಮಾರ್, ಅಂಕೋಲದಲ್ಲಿ ಇನ್ಸ್‍ಪೆಕ್ಟರ್  ಕಮಲೇಶ್, ಮಡಿಕೇರಿಯಲ್ಲಿ ಇನ್ಸ್ ಪೆಕ್ಟರ್ ಹರೀಶ್ಚಂದ್ರ ಪಾಂಡೆ ವಹಿಸಲಿದ್ದಾರೆ. ಇವರನ್ನೂ ಭೇಟಿ ಮಾಡಿ ಶೌರ್ಯತಂಡದ ನೆರವು ನೀಡಲಾಗುವುದು ಎಂದರು.

ಸದ್ರಿ ಭೇಟಿಯ ಸಂದರ್ಭ ದಕ್ಷಿಣಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ  ಪದ್ಮನಾಭ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ, ಶೌರ್ಯವಿಪತ್ತು ನಿರ್ವಹಣಾಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ, ಶೌರ್ಯ ಸಮಿತಿಯ ಸುಳ್ಯ ತಾಲೂಕಿನ ಜಯರಾಮ್ ಪಿ.ಜಿ, ಕ್ಯಾಪ್ಟನ್‍ ಸತೀಶ್, ಪುತ್ತೂರು ತಾಲೂಕಿನ ಮಾಸ್ಟರ್ ಮನೋಜ್, ಕ್ಯಾಪ್ಟನ್ ಸುರೇಶ್, ಮತ್ತು ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.