"ಅಗರ್ ಕಿಸೀ ಚೀಜ಼್ ಕೋ ದಿಲ್ ಸೆ ಚಾಹೋ ತೊ ಸಾರಿ ಕಾಯ್‌ನಾತ್ ಉಸೆ ತುಮ್ ಸೆ ಮಿಲಾನೆ ಮೆ ಲಗ್ ಜಾತಿ ಹೇ" ಹಿಂದಿ ಸಿನಿಮಾ ಒಂದರ ಈ ಡೈಲಾಗ್ ಬಹಳಷ್ಟು ಜನರ ಮೆಚ್ಚುಗೆಯನ್ನು ಪಡೆದಿತ್ತು  ಮಾತ್ರ ಅಲ್ಲದೆ ಬಹಳ ಆಪ್ಯವಾಗಿ ಕಾಣುತ್ತದೆ ಕೂಡ. ತಾನು ಅಂದುಕೊಂಡಂತೆ ಬದುಕಲು, ಸಾಧಿಸಲು ಸಾಧ್ಯವಾಗಲಿಲ್ಲ ಅನ್ನುವುದಕ್ಕೆ ಒಂದಷ್ಟು ಕಾರಣಗಳನ್ನು ಕೊಟ್ಟು ತಮ್ಮ ನಡವಳಿಕೆಯನ್ನು ಸಮಜಾಯಿಸಿಕೊಳ್ಳುವವರಿಗಿಂತ ತಾನು ಅಂದುಕೊಂಡಂತೆ ಬದುಕಲು ಪೂರ್ಣ ಪ್ರಯತ್ನದಿಂದ ಶ್ರಮಿಸುವವರಿಗೆ ಪೂರಕವಾದ ಜಗತ್ತು ಖಂಡಿತ ಸೃಷ್ಟಿ ಆಗುತ್ತದೆ.   ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ಅದೃಷ್ಟ  ಎಂದರೆ ಅವಕಾಶವನ್ನು ಪಡೆಯುವವನು ,ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿ ಕೊಳ್ಳುವವನು. ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನು ಸಾಧಿಸಲಾಗದು ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ ಸೋತರೆ ಅನುಭವ". ಎಷ್ಟೊಂದು ಅರ್ಥಪೂರ್ಣ ಮಾತು. ಒಟ್ಟಾರೆಯಾಗಿ ಹೇಳುವುದಾದರೆ ಸಾಧನೆಗೆ  ಸತತ ಪ್ರಯತ್ನಶೀಲರಾಗಿರುವುದೇ ಮಾನದಂಡ. ಎಷ್ಟೋ ದೊಡ್ಡ ದೊಡ್ಡ ಸಾಧಕರಿದ್ದಾರೆ. ಕನಿಷ್ಠ ವಿದ್ಯಾಭ್ಯಾಸ ಮಾಡಿ ಕ್ರಿಕೆಟ್ ಜಗತ್ತಿನಲ್ಲಿ ಗರಿಷ್ಠ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಒಬ್ಬ ಅದ್ಭುತನಾಗಿ ಕಾಣುತ್ತಾನೆ  ಆದರೆ ನಮ್ಮ ಕಣ್ಣಳತೆ ದೂರದಲ್ಲಿ ಸಾಧಕರು ಇದ್ದರೂ ನಾವು ಗುರುತಿಸುವಲ್ಲಿ ಸೋಲುತ್ತೇವೆ ಅನ್ನುವುದು ಇತ್ತೀಚೆಗೆ ನನ್ನ ಗುರುಗಳಾದ ಶ್ರೀ ಗಣೇಶ್ ಅಮೀನ್ ಸಂಕಮಾರ್ ಅವರ ಆತ್ಮ ಚರಿತ್ರೆ "ಮಣ್ಣಿನೊಳಗಿನ ಅನ್ನ" ಓದುವಾಗಲೇ ತಿಳಿದದ್ದು  ಅವರು ಪ್ರಾಧ್ಯಾಪಕರು, ಜನಪದ ಪಂಡಿತರು, ತುಳುವಿನ ಪ್ರಖರ ವಾಗ್ಮಿ ಅನ್ನುವುದು ಗೊತ್ತಿತ್ತು ಆದ್ರೆ  ಅವರು ಐದು ವರ್ಷಗಳ ಕಾಲ ಶಾಲೆ ತೊರೆದು ಕೃಷಿಕನಾಗಿ ದುಡಿದು ಮತ್ತೆ ವಿದ್ಯಾಭ್ಯಾಸ ಪೂರೈಸಿದರು ಅಂತ ಓದಿದಾಗ ಕಣ್ಣಂಚಿನಲ್ಲಿ ಹನಿಯೊಂದು ಮಿಂಚಿತ್ತು ಅವರ ಸಾಧನೆಗೆ ಮತ್ತು ತಾಯಿ ಶಾರದೆಯ ಒಲುಮೆಗೆ. ಹೌದು ಅವಳು ಶೀಘ್ರ ಫಲದಾಯಿನಿ ಅವಳನ್ನು ಒಲಿಸಿಕೊಳ್ಳಲು ಭಕ್ತಿಯೊಂದಿಗೆ ಶ್ರದ್ದೆ ಇದ್ದರೆ ಸಾಕು ಅವಳು ಲಕ್ಷ್ಮಿಯಂತೆ ಚಂಚಲೆಯಲ್ಲ ಒಮ್ಮೆ ಒಲಿಸಿಕೊಂಡು ಬಿಟ್ಟರೆ ಸಾಕು ಜೀವನ ಪರ್ಯಂತ ನಮ್ಮನ್ನು ತೊರೆದು ಹೋಗಳು. ಇಂದು ನಾನು ಹೇಳಲು ಹೊರಟಿರುವುದು ತಾಯಿ ಶಾರದೆಯನ್ನು ಶ್ರದ್ಧೆಯಿಂದ ಒಲಿಸಿಕೊಂಡ ಸಾಧಕನ ಬಗ್ಗೆ ಅವರೇ ಹೇಳುವಂತೆ ಅವರು ಸಾಮಾನ್ಯರಲ್ಲಿ ಅತೀ ಸಾಮಾನ್ಯ ಹೌದು ಕನಸು ತುಂಬಿದ ಕಣ್ಣುಗಳು, ಮುಗ್ಧ ನಗು, ಸೌಮ್ಯ ಹಿತ ಮಿತ ಮಾತು ಇಷ್ಟೇ ಅವರ ಆಸ್ತಿ. ಆದರೆ ಈ ಸಹೋದರ ನನ್ನನ್ನೂ ಸೇರಿಸಿ ಒಂದಷ್ಟು ಜನರಿಗೆ ಪ್ರೇರಕನಾಗಬಲ್ಲ. ಹೆಸರು  ಭಾಸ್ಕರ್ ಎ. ವರ್ಕಾಡಿ ಪ್ರೀತಿಯಿಂದ ಎಲ್ಲರೂ  ಬಾಚು ಎಂದು ಕರೆಯುತ್ತಾರೆ. ವರ್ಕಾಡಿಯ ಆರ್ಯಾಪು ಮನೆಯಲ್ಲಿ ಶ್ರೀ ಲಕ್ಷಣ ಪೂಜಾರಿ ಹಾಗೂ ರತ್ನಾವತಿ ದಂಪತಿಗಳಿಗೆ ಮೊದಲ ಕುವರನಾಗಿ ಜನಿಸಿದ ಇವರಿಗೆ ಒಬ್ಬ ತಮ್ಮ ಹಾಗೂ ಮೂರು ತಂಗಿಯಂದಿರು. ಪ್ರಾಥಮಿಕ ಶಿಕ್ಷಣ ಒಂದರಿಂದ ನಾಲ್ಕನೇ ತರಗತಿಯವರೆಗೆ ಎ. ಯು. ಪಿ. ಶಾಲೆ ಬಜಲ ಕರಿಯ, ಐದರಿಂದ ಹತ್ತನೇ ತರಗತಿಯವರೆಗೆ ಶ್ರೀ ವಾಣಿಜ್ಯ ಹೈಸ್ಕೂಲ್ ಕೊಡ್ಲಮೊಗರು ಇಲ್ಲಿ ಪೂರೈಸಿದರು. 

ಮುಂದೆ ಕಲಿಯುವ ಬಯಕೆ ಇದ್ದರೂ ಕೂಡ ಹಿರಿಮಗನಾಗಿ ಮನೆಯ ಜವಾಬ್ದಾರಿ ಹೆಗಲ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮೋಹನ ದಾಸ್ ಹಾಗೂ ಪ್ರಮೋದ  ಪಾವಲ ಇವರ ಸಹಕಾರದೊಂದಿಗೆ  ಮಂಗಳೂರು ವೆಲೆನ್ಸಿಯಾದ ಸೂಟರ್‌ಪೇಟೆಯಲ್ಲಿರುವ ಎಸ್. ಬಿ  ಇಂಡಸ್ಟ್ರೀಸ್ನಲ್ಲಿ  ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತೀರ ಎಳೆಯ ವಯಸ್ಸು ಆದರೆ ಜವಾಬ್ದಾರಿ ತುಂಬಾ ದೊಡ್ಡದಿತ್ತು. ಕೆಲಸ ಕಷ್ಟ ಅನಿಸಿದರೂ ಮಾಡುವುದು ಆ ಪೋರನಿಗೆ ಅನಿವಾರ್ಯ ಆಗಿತ್ತು. ಆದರೆ ಮನದಲ್ಲಿದ್ದ ಜ್ಞಾನದಾಹ ಎಂದೂ ಬತ್ತಿರಲಿಲ್ಲ ಅದಕ್ಕೆ ಪುಸ್ತಕಗಳನ್ನು ಓದುವುದರ ಮೂಲಕ ನೀರುಣಿಸಿ ಪೋಷಿಸಿಕೊಂಡು ಬಂದರು. ಮುಂದೊಂದು ದಿನ ತಾನು ಬಯಸಿದ್ದನ್ನು ಪಡೆದೇ ಪಡೆಯುತ್ತೇನೆ ಎಂಬ ಅವರ ಆತ್ಮವಿಶ್ವಾಸಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಪ್ರೇರಕವಾಯಿತು. 2012ರಲ್ಲಿ ಸಹೋದರಿ ಹರ್ಷಿತ ದೂರಶಿಕ್ಷಣದ ಮೂಲಕ ವಿದ್ಯಾಭ್ಯಾಸ ಮುಂದುವರಿಸಬಹುದು ಎಂಬುದಾಗಿ ಕೊಟ್ಟ ಸಣ್ಣ ಮಾಹಿತಿ ಅವರ ಸಾಧನೆಯ ಪಥಕ್ಕೆ ದೀವಟಿಗೆಯಾಗಿ ನಿಂತಿತು.  ಹಾಗೆಂದು ಒಮ್ಮೆಲೇ ನಿರ್ಧಾರ ತೆಗೆದುಕೊಳ್ಳುವಂತಿರಲಿಲ್ಲ ಮನೆಯ ಹಿರಿಮಗನಾಗಿ ಜವಾಬ್ದಾರಿ ಇತ್ತು, ಒಂದು ಸಂಸ್ಥೆಯ ಕೆಳಗೆ ಕೆಲಸ ಮಾಡುತ್ತಿದ್ದರಿಂದ ಅಲ್ಲಿಯ ಬದ್ದತೆ ಕೂಡ. ಹೆತ್ತವರಲ್ಲಿ ತಿಳಿಸಿದಾಗ ಕೆಲಸದ ಜೊತೆ ಓದು ಹೊರೆ ಅನಿಸದಿದ್ದರೆ ಖಂಡಿತ ಮಾಡು ಎಂಬ ಬೆಂಬಲ ದೊರಕಿತು. ಹಾಗೆಯೇ ಎಸ್. ಬಿ. ಇಂಡಸ್ಟ್ರೀಸ್ನ ಮಾಲಕರಾದ ಎಸ್. ಬಾಬು ದಂಪತಿಗಳು ಪೂರ್ಣ ಬೆಂಬಲ ನೀಡಿದರು . ಅಂತೆಯೇ ಭಾಸ್ಕರ್ ಎಸ್.ಎಸ್.ಎಲ್.ಸಿ ಮುಗಿಸಿ ಬರೋಬರಿ ಒಂಭತ್ತು ವರ್ಷದ ಬಳಿಕ ತಮ್ಮ ಪಿ ಯು ಸಿ ಶಿಕ್ಷಣವನ್ನು  2013 ರಲ್ಲಿ  ಮಾತಾ ಎಜುಕೇಷನ್ ಟ್ಯುಟೋರಿಯಲ್ ಮುಖಾಂತರ ಸರಕಾರಿ ಪದವಿಪೂರ್ವ ಕಾಲೇಜ್ ಬೊಕ್ಕಪಟ್ನದಲ್ಲಿ ಮುಗಿಸಿದರು. ನಂತರ ಪದವಿ ಶಿಕ್ಷಣವನ್ನು ದೂರ ಶಿಕ್ಷಣದ ಮುಖಾಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು. 2018 ರಲ್ಲಿ ಸಮಾಜಶಾಸ್ತ್ರ ಹಾಗೂ 2020ರಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.  ಈ ಎಲ್ಲ ಸಾಧನೆಗೆ ಪ್ರೇರಕರಾದ ಮಾರ್ಗದರ್ಶಕರಾದ ಗುರು ಹರೀಶ್ ಟಿ.ಜಿ ಹಾಗೂ ತನ್ನ ಸಹಪಾಠಿಗಳಿಗೆ ಸದಾ ಭಾಸ್ಕರ್ ಆಭಾರಿಯಾಗಿರುತ್ತಾರೆ. ಮನೆಮಗನಾಗಿ ಅಮ್ಮ ಅಪ್ಪ ತಮ್ಮ ತಂಗಿಯರ ಸಹಕಾರ ಸದಾ ಇವರಿಗೆ ಪ್ರೀತಿಪೂರ್ವಕವಾಗಿ ದೊರೆಯುವಂತದ್ದೇ ಆದರೆ ಒಬ್ಬ ಸಾಧಕನಿಗೆ ಸಾಧನೆ ಮಾಡಲು ಯೋಗ ಯೋಗ್ಯತೆ ಎರಡೂ ಕೂಡಿ ಬಂದಾಗಲೇ ಅವನಿಗೆ ನಿರೀಕ್ಷಿತ ಫಲ ಪಡೆಯಲು ಸಾಧ್ಯವಾಗುತ್ತದೆ. ಭಾಸ್ಕರ್ ಅವರಿಗೆ ಯೋಗದಿಂದ ದಕ್ಕಿದ ಸಹಕಾರ ಅದು ಅವರ ಮಾಲಕರಾದ  ಎಸ್. ಬಾಬು ಹಾಗೂ ಸುಮಿತ್ರ ದಂಪತಿಗಳಿಂದ. ಪುಟ್ಟ ಹುಡುಗ ಮನೆಯ ಜವಾಬ್ದಾರಿ ಹೊತ್ತು ಅವರಲ್ಲಿಗೆ ಬಂದಾಗ  ಅವನನ್ನು ಮಗನಂತೆ ಸ್ವೀಕರಿಸಿದ್ದರು ತನ್ನ ಮಕ್ಕಳಲ್ಲಿ ಅವನಲ್ಲಿ ಭೇದ ಮಾಡದೆ ಅವನನ್ನು ಪಾಲಿಸಿದ್ದರು.  ತಮ್ಮ ಮನೆಯಲ್ಲಿ ಅಗತ್ಯವಾದ ಎಲ್ಲ ಸವಲತ್ತು ನೀಡಿ ವಿದ್ಯಾಭ್ಯಾಸದ ಜೊತೆ ಜೊತೆಗೆ ತಮ್ಮ ಎರಡು ತಂಗಿಯಂದಿರಿಗೆ ಮದುವೆ ಮಾಡುವಲ್ಲಿ ಭಾಸ್ಕರ್ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ಅವರ ಸ್ವ ಪ್ರಯತ್ನ ಹಾಗು ಅವರ ಮಾಲಕರ ಸಹಕಾರ. ಅದೇ ಕಾರಣಕ್ಕೆ ಭಾಸ್ಕರ್ ಉನ್ನತ ಶಿಕ್ಷಣ ಪಡೆದುಕೊಂದಿದ್ದರೂ ಕೂಡ ತನ್ನನ್ನು  ಪಾಲಿಸಿ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿದ ಸಂಸ್ಥೆಯನ್ನು ತೊರೆಯದೇ ಇನ್ನೂ ಅಲ್ಲೇ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ  ಅವರ ಮುಂದಿನ ಪ್ರಯತ್ನವೆಂದರೆ ಕೆ ಸೆಟ್, ನೆಟ್ ಪರೀಕ್ಷೆ ಬರೆಯುವುದು, ಅದರ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಜನಪದ ವಿಷಯದಲ್ಲಿ ಪಿಎಚ್.ಡಿ ಮಾಡುವ ಅಮಿತ ಬಯಕೆಯನ್ನು ಹೊಂದಿದ್ದಾರೆ. ಭಾಸ್ಕರ್ ವರ್ಕಾಡಿ ಕಲಿಕೆಯ ಜೊತೆಜೊತೆಗೆ ಉತ್ತಮ ಬರಹಗಾರರು. ತುಳು ಮತ್ತು ಕನ್ನಡ  ಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸುತ್ತಾರೆ. ಸಾಹಿತಿಗಳಾದ ಚೇತನ್ ವರ್ಕಾಡಿ, ರಘುನಾಥ್ ವರ್ಕಾಡಿ, ಶುಭೋದಯ್ ಸೂಟರ್‌ಪೇಟೆ  ಹಾಗೂ ಅನೇಕ ಸಾಹಿತ್ಯ ಬಳಗಗಳು ಇವರಿಗೆ ಬರಹದಲ್ಲಿ ಪ್ರೋತ್ಸಾಹವನ್ನು ನೀಡುತ್ತಿದೆ. 2020ರಲ್ಲಿ ಇವರ ತುಳುವಪ್ಪೆ ತೇರು ಅನ್ನುವ ಆಲ್ಬಮ್ ಸಾಂಗ್ ಕೂಡ ಬಿಡುಗಡೆಯಾಗಿದೆ. ಸಮಾಜಕ್ಕಾಗಿ ಸದಾ ಮಿಡಿಯುವ ಇವರು ನಿರಂತರವಾಗಿ ರಕ್ತದಾನ ಮಾಡುತ್ತಲೇ ಬಂದಿದ್ದಾರೆ. ಇವರ ಎಲ್ಲಾ ಸಾಧನೆಯನ್ನು ಗುರುತಿಸಿ ಪ್ರಜ್ವಲ್ ಯುವಕ ಮಂಡಲ, ವಿಜಯ ಫ್ರೆಂಡ್ಸ್ ಸೂಟರ್‌ಪೇಟೆ ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಮಾಡಿವೆ. ಕೆಲವೊಂದು ಸಲ ಜನರ ಮನಸ್ಸಿನಲ್ಲಿ ನಿಲ್ಲಲ್ಲು ದೊಡ್ಡದೇನು ಮಾಡಬೇಕಾಗಿಲ್ಲ ಪ್ರಾಮಾಣಿಕವಾಗಿ ಮಾಡಿದ ಸರ್ವ ಪ್ರಯತ್ನಗಳು ಮನಸ್ಸಿಗೆ ತಟ್ಟುತ್ತವೆ. ತನ್ನ ವಿಧ್ಯಾಭ್ಯಾಸಕ್ಕೆ ಬಡತನ ಅಡ್ಡಿಯಾಯಿತು ಅನ್ನುವವರನ್ನು ತುಂಬಾ ಮಂದಿಯನ್ನು ನಾವು ಕಾಣುತ್ತೇವೆ ಅವರೆಲ್ಲರ ಮಧ್ಯೆ ಭಾಸ್ಕರ್ ಅಂತವರು ಅನರ್ಘ್ಯ ರತ್ನವಾಗಿ ಗೋಚರಿಸುತ್ತಾರೆ. ಕಲಿಯಬೇಕು ಎಂಬ ಹಂಬಲ ಇರುವವರನ್ನು ಯಾರನ್ನು ವಿದ್ಯಾಮಾತೆ ದೂರ ಮಾಡಿದ್ದೆ ಇಲ್ಲ. ಇಲ್ಲಿಂದ ಹೊಟ್ಟೆ ಪಾಡಿಗಾಗಿ ಮುಂಬಾಯಿಗೆ ಸೇರಿದ್ದ ಎಷ್ಟೋ ಮಂದಿ ಹಗಲು ಮೋರಿಯಲ್ಲಿ ಗ್ಲಾಸ್ ತೊಳೆದು ರಾತ್ರಿ ಶಾಲೆಯಲ್ಲಿ ಕಲ್ತು ಈಗ ದೊಡ್ಡ ಉದ್ಯಮಿಗಳಾದ ನಿದರ್ಶನ ನಮ್ಮ ಕಣ್ಣ ಮುಂದೆಯೇ ಸಿಗುತ್ತದೆ. ಎಂದೂ ಶಾಲೆಯ ಮೆಟ್ಟಲನ್ನೇ ಹತ್ತದ ಅದೆಷ್ಟೋ ಯಕ್ಷಗಾನ ಕಲಾವಿದರಲ್ಲಿ ಆಶ್ಚರ್ಯ ಅನ್ನುವಷ್ಟು ಅಗಾಧ ಜ್ಞಾನ ಭಂಡಾರ  ನಾವು ಕಾಣುತ್ತೇವೆ ಅಲ್ಲಿ ಶಾರದೆ ಕಲಾಮಾತೆಯಾಗಿ ಅನುಗ್ರಹಪ್ರದಳಾಗಿ ಅವರ ನಾಲಿಗೆಯಲ್ಲಿ ಕುಣಿಯುತ್ತಾಳೆ. ಒಟ್ಟಾರೆ ಬೇಕಾಗಿರುವುದು ನಿಶ್ಚಿತ ಗುರಿ ಹಾಗೂ ಅದನ್ನು ಪಡೆಯುವಲ್ಲಿ ನಿರಂತರ ಪ್ರಯತ್ನ. ಭಾಸ್ಕರ್ ಇದರಲ್ಲಿ ಗೆದ್ದಿದ್ದಾರೆ ಒಬ್ಬ ಸೋದರಿಯಾಗಿ  ನನ್ನ ಆಸೆ ಹಾರೈಕೆ ಎಂದರೆ ಅವರ ಕನಸ್ಸೆಲ್ಲಾ ನನಸಾಗ ಬೇಕು ಅವರ ಹೆಸರಿನ ಮುಂದೆ ಡಾಕ್ಟರ್ ಕಾಣಬೇಕು. ಈಗ ಹಣವೊಂದಿದ್ದರೆ ಎಲ್ಲವೂ ಕ್ಷಣ ಮಾತ್ರದಲ್ಲಿ ದೊರೆಯುತ್ತದೆ ಆದರೆ ಇಂತಹ ಪ್ರತಿಭೆಗಳು ಪಡೆದುಕೊಳ್ಳುವ ಪ್ರತಿ ಪುರಸ್ಕಾರದಲ್ಲೂ ಅವರ ಪರಿಶ್ರಮದ ಪ್ರತಿಫಲನವಿರುತ್ತದೆ, ಸಿಗುವ ಸನ್ಮಾನದಲ್ಲಿ ಘನತೆ ತೂಕ ಇರುತ್ತದೆ. ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ತಾವು ಬಾಳಬೇಕು ಅನ್ನುವುದೇ ನಮ್ಮ ಆಶಯ. ನೀವು ಕಂಡ ಕನಸುಗಳೆಲ್ಲಾ ನನಸಗಾಲಿ. ತಾಯಿ ಶಾರದೆಯ ಆಶೀರ್ವಾದ ಸದಾ ತಮ್ಮ ಮೇಲಿರಲಿ. ತಮ್ಮ ಭವಿತವ್ಯ ಉಜ್ವಲವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಶುಭವಾಗಲಿ.

✍️ ಗೀತಾ ಲಕ್ಷ್ಮೀಶ್