ಉಜಿರೆ: ಹೆಗ್ಗೋಡು ನೀನಾಸಂ ಪ್ರತಿಷ್ಠಾನದ ನಿರ್ದೇಶಕ ಪ್ರೊ. ಟಿ.ಪಿ. ಅಶೋಕ ಅವರ ನೇತೃತ್ವದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ಸಂಘದ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ಸಾಹಿತ್ಯ ಅಧ್ಯಯನ ಶಿಬಿರದಿಂದಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರಭುತ್ವದೊಂದಿಗೆ ಸಾಹಿತ್ಯಾಭಿರುಚಿ ಹಾಗೂ ಆಸಕ್ತಿಯಿಂದ ಪುಸ್ತಕ ಓದುವ ಹವ್ಯಾಸ ಬೆಳೆದಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ನೀನಾಸಂ ಪ್ರತಿಷ್ಠಾನದ ಆಶ್ರಯದಲ್ಲಿ ಸಾಹಿತ್ಯ ಅಧ್ಯಯನ ಶಿಬಿರದ ರಜತ ಸಂಭ್ರಮದ ಶುಭಾವಸರದಲ್ಲಿ ಆಯೋಜಿಸದ ಕಲಾನುಸಂಧಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಖ್ಯಾತ ವಿಮರ್ಶಕರಾದ ಪ್ರೊ. ಟಿ.ಪಿ. ಅಶೋಕ ಅವರು ಚಲಿಸುವ ಗ್ರಂಥಾಲಯವೇ ಆಗಿದ್ದು ಕಾವ್ಯ, ಕವನ, ಕಾದಂಬರಿ, ಭಾವಗೀತೆ, ನಾಟಕಗಳ ಬಗ್ಯೆ ಸೃಜನಾತ್ಮಕ ವಿಮರ್ಶೆ ಬರೆದು ಕೃತಿಗಳನ್ನು ಓದಲು ಪ್ರೇರಣೆ, ಪ್ರೋತ್ಸಾಹ ನೀಡುತ್ತಾರೆ. ಆಧುನಿಕ ಕಾಲದಲ್ಲಿ ಸುದೀರ್ಘ ಹಾಗೂ ಗಂಭೀರ ಸಾಹಿತ್ಯ ಕೃತಿಗಳಿಗಿಂತ ಲಘುಹರಟೆ, ಚುಟುಕುಗಳು, ಕವನಗಳು ಹಾಗೂ ಹಾಸ್ಯ ಲೇಖನಗಳನ್ನು ಎಲ್ಲರೂ ಓದಲು ಇಷ್ಟ ಪಡುತ್ತಾರೆ. ಸತ್ಯಹರಿಶ್ಚಂದ್ರ, ರಾಮ, ಕೃಷ್ಣ, ರಾವಣ, ಪಂಚಪಾಂಡವರು ಮೊದಲಾದವರನ್ನು ಇಂದಿಗೂ ಜೀವಂತವಾಗಿಟ್ಟಿರುವವರು ಯಕ್ಷಗಾನ, ನಾಟಕ ಹಾಗೂ ತಾಳಮದ್ದಳೆ ಕಲಾವಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ನೀನಾಸಂ ಪ್ರತಿಷ್ಠಾನದವರು ಪೌರಾಣಿಕಕಥೆ, ನಾಟಕ ಅಥವಾ ಹಳೆಗನ್ನಡ ಮತ್ತು ಸಂಸ್ಕ್ರತ ಕಾವ್ಯಗಳನ್ನು ಆಧರಿಸಿದ ನಾಟಕ ಪ್ರದರ್ಶನದ ಮೂಲಕ ಅವುಗಳನ್ನು ಆಧುನಿಕತೆಯ ಬೆಳಕಿನಲ್ಲಿ ನೋಡುವ, ವಿಮರ್ಶಿಸುವ, ಮರುಮೌಲ್ಯಮಾಪನ ಮಾಡುವ ಕಾಯಕ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿ ಅಭಿನಂದಿಸಿದರು.
ಉಜಿರೆಯಲ್ಲಿ “ಸಮೂಹ” ಸಾಂಸ್ಕ್ರತಿಕ ಸಂಘಟನೆ ಆಶ್ರಯದಲ್ಲಿ ನೀನಾಸಂ ಸಹಯೋಗದಲ್ಲಿ ಆಯೋಜಿಸಿದ ಶಿಬಿರ ಹಾಗೂ ನಾಟಕ ಪ್ರದರ್ಶನಗಳಿಂದ ಅನೇಕ ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಹಾಗೂ ವಿಮರ್ಶಕರ ಪ್ರೇರಣೆ, ಮಾರ್ಗದರ್ಶನ ದೊರಕಿದೆ. ಇದರಿಂದಾಗಿ ಅನೇಕ ಉದಯೋನ್ಮುಖಕಲಾವಿದರು ಮೂಡಿ ಬಂದಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಹಿಂದೆ ದೇವಸ್ಥಾನಗಳು, ಗುರುಮಠಗಳಲ್ಲಿ ಕಾವ್ಯವಾಚನ, ಯಕ್ಷಗಾನ, ಹರಿಕತೆಗಳು ನಡೆಯುತ್ತಿದ್ದುದನ್ನು ಸ್ಮರಿಸಿದ ಅವರು ಧರ್ಮಸ್ಥಳದಲ್ಲಿ ಕಳೆದ 51 ವರ್ಷಗಳಿಂದ ಪ್ರತಿವರ್ಷ ಆಷಾಢದಲ್ಲಿ ಎರಡು ತಿಂಗಳು ಕಾವ್ಯವಾಚನ ನಡೆಯುತ್ತಿದೆ ಎಂದು ಅವರು ಹೇಳಿದರು.
ಗಜಾನನ ಶರ್ಮಾರು ಬರೆದ ರಾಣಿ ಚೆನ್ನಭೈರಾದೇವಿ ಕಾದಂಬರಿ ಓದಿ ಪ್ರೇರಿತರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೊನ್ನಾವರದಲ್ಲಿ ಆಕೆಯ ಸ್ಮಾರಕವಾಗಿ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದು, ಈಗಾಗಲೆ ಕಾರ್ಯ ಪ್ರಗತಿಯಲ್ಲಿದೆ. ಹೀಗೆ ಸಾಹಿತ್ಯದ ಅಧ್ಯಯನದಿಂದ ಅನೇಕ ಕಲ್ಯಾಣ ಕಾರ್ಯಕ್ರಮಗಳೂ ನಡೆಯುತ್ತವೆ ಎಂದು ಹೇಳಿದರು.
ಬೆಂಗಳೂರಿನ ಖ್ಯಾತಕಥೆಗಾರ ವಸುಧೇಂದ್ರ ಮಾತನಾಡಿ ಕಲೆಯನ್ನು ಪ್ರೀತಿಸಿ, ಗೌರವಿಸಬೇಕು. ಜಾತಿ-ಮತ, ಭಾಷೆ, ದೇಶಗಳ ಎಲ್ಲೆಯನ್ನು ದಾಟುವ ಸಾಮಥ್ರ್ಯಯಾವುದೇ ಕಲೆಗೆ ಇದೆ. ಆಳವಾದ ಅಧ್ಯಯನ ಮಾಡಿ ಕಲೆಯೊಂದಿಗೆ ಅನುಸಂಧಾನ ಮಾಡುವುದೇ ಕಲಾನುಸಂಧಾನ ಶಿಬಿರದ ಉದ್ದೇಶವಾಗಿದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದ ನಿರ್ದೇಶಕ ಪ್ರೊ. ಟಿ.ಪಿ. ಅಶೋಕ ಮಾತನಾಡಿ, ಜ್ಞಾನದಾಸೋಹದಲ್ಲಿ ನಿರತವಾಗಿರುವ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯ ಸಾಂಸ್ಕ್ರತಿಕ ಸಂ ಕೇಂದ್ರಗಳೂ ಆಗಿವೆ. ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಪಿ. ಸಂಪತ್‍ಕುಮಾರ್ ಮಾತನಾಡಿ 25 ವರ್ಷಗಳಲ್ಲಿ ನಡೆದ ಸಾಹಿತ್ಯ ಅಧ್ಯಯನ ಶಿಬಿರಗಳ ಸಾಧನೆ ಮತ್ತು ಪ್ರಯೋಜನದ ಅವಲೋಕನ ಮಾಡಿ ಕೃತಜ್ಞತೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಕೌಶಲ ವೃದ್ಧಿಯೊಂದಿಗೆ ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಮಾತನಾಡಿ, ಎಲ್ಲರೂ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿ ದಿನ ಒಂದು ಗಂಟೆ ಆದರೂ ಸ್ವಾಧ್ಯಾಯಕ್ಕೆ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.
ಸಾಹಿತ್ಯ ಅಧ್ಯಯನ ಶಿಬಿರದ ರೂವಾರಿಗಳಾದ ಪ್ರೊ. ಟಿ.ಪಿ. ಅಶೋಕ ಮತ್ತು ಡಾ. ಬಿ.ಪಿ. ಸಂಪತ್‍ಕುಮಾರ್ ಅವರನ್ನು ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥರಾದ ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಜಯಶ್ರೀ ಧನ್ಯವಾದವಿತ್ತರು. ಡಾ. ದಿವ ಕೊಕ್ಕಡ ಕಾರ್ಯಕ್ರಮ ನಿವಹಿಸಿದರು.