ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ಬ್ಯಾಂಕಿನ ಸಭಾಂಗಣದ ಮೂಲಕ ಆನ್ ಲೈನ್ ಪತ್ರಿಕಾಗೋಷ್ಠಿ ನಡೆಸಿ ಹೊಸ ವರ್ಷದ ಶುಭಾಶಯದೊಂದಿಗೆ ಜನರ ಸ್ವಾವಲಂಬಿ ಬದುಕಿಗಾಗಿ 'ನಮ್ಮ ಬ್ಯಾಂಕ್ ' ಕಾರ್ಯಕ್ರಮಗಳನ್ನು ಪ್ರಕಟಿಸಿದರು.
ಬ್ಯಾಂಕಿನ ನವೋದಯ ಸ್ವಸಹಾಯ ಗುಂಪು ಜಿಲ್ಲೆಯನ್ನು ದಾಟಿ ಶಿವಮೊಗ್ಗ, ಧಾರವಾಡ ಜಿಲ್ಲೆಯ ವ್ಯಾಪ್ತಿಯನ್ನು ದಾಟಿ ಮುನ್ನಡೆದಿದೆ. ಮಹಿಳೆಯರಿಗೆ ಹೆಚ್ಚು ಅನುಕೂಲ ಇದರಿಂದ ಆಗಿದೆ, ಉಳಿದ ಮಹಿಳೆಯರೂ ನವೋದಯ ಸ್ವಸಹಾಯ ಗುಂಪು ಸೇರಿ ಬ್ಯಾಂಕ್ ಜನರ ಒಳಿತಿಗಾಗಿ ಎಂಬುದನ್ನು ಮನಗಾಣಬೇಕು ಎಂದು ರಾಜೇಂದ್ರ ಕುಮಾರ್ ಹೇಳಿದರು.
ಈಗಾಗಲೇ 105 ಶಾಖೆಗಳನ್ನು ಎಸ್ ಸಿ ಡಿ ಸಿ ಸಿ ಹೊಂದಿದ್ದು 2021ರಲ್ಲಿ ಮತ್ತಷ್ಟು ಶಾಖೆಗಳೊಡನೆ ಜನರ ನಡುವೆ ಬೆಳೆಯಲಿದೆ, ಇತರ ಹಲವು ಊರುಗಳಲ್ಲಿ ಬ್ಯಾಂಕಿನ ಎಟಿಎಂ ಸದ್ಯವೇ ಆರಂಭವಾಗುವ ಮಾಹಿತಿಯನ್ನೂ ಅವರು ನೀಡಿದರು.
ಮೊದಲಿಗೆ ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದು ಬೆಳಿಗ್ಗೆ ಮತ್ತು ಸಂಜೆಯ ಸೇವೆ ಒದಗಿಸಿದ ಬ್ಯಾಂಕು ನಮ್ಮದು. ಕೃಷಿ ಸಾಲ ವಾಪಸಾತಿಯಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದ ಸಾಧನೆ ನಮ್ಮ ಬ್ಯಾಂಕಿನದು. ಹೊಸ ವರ್ಷದಲ್ಲಿ ಗ್ರಾಹಕರ ಹಿತ ರಕ್ಷಿಸಲು ಹೊಸ ಸಾಲ ಪಡೆಯುವವರಿಗೆ ಒಂದು ತಿಂಗಳ ಬಡ್ಡಿ ಮನ್ನಾ, ಹೊಸದಾಗಿ ಖಾತೆ ತೆರೆಯುವವರಿಗೆ ವಿಮಾ ಸೌಲಭ್ಯಗಳನ್ನು ಒದಗಿಸುವ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.
ಜಿಲ್ಲೆಯಲ್ಲಿ ಗಾಲಿಯ ಮೇಲಿನ ಮೊಬೈಲ್ ಬ್ಯಾಂಕ್ ಯಶಸ್ಸು ಕಂಡಿದೆ; 2021ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಮ್ಮ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭವಾಗುವ ಮಾಹಿತಿಯನ್ನು ಎಂ.ಎನ್.ಆರ್.ಕೆ. ವಿವರಿಸಿದರು. 2020 ಕೊರೋನಾ ವರುಷ, 2021 ದೇಶ, ಲೋಕ, ಬದುಕು ಎಲ್ಲದಕ್ಕೂ ಒಳಿತು ಮಾಡುವ ವರ್ಷ ಆಗುವ ಆಶಯವನ್ನು ಪ್ರಕಟಿಸಿದ ಅವರು ಬ್ಯಾಂಕು ಆ ನಿಟ್ಟಿನಲ್ಲಿ ರಚನಾತ್ಮಕ ಹೆಜ್ಜೆ ಇಡುವುದನ್ನು ಮುಂದಿಟ್ಟರು.
ಪತ್ರಿಕಾಗೋಷ್ಠಿಯ ವೇಳೆ ಬ್ಯಾಂಕ್ ನಿರ್ದೇಶಕ ಮಂಡಳಿಯವರು ಪತ್ರಕರ್ತರ ನಡುವೆ ಹಾಜರಿದ್ದರು.