ಮಂಗಳೂರು:- ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 55% ಕ್ಕಿಂತಲೂ ಹೆಚ್ಚು ಪಂಚಾಯತಿಗಳಲ್ಲಿ ಅಧಿಕಾರ ಹಿಡಿದಿದೆ, ದ. ಕ. ಜಿಲ್ಲೆಯಲ್ಲಿ 140 ಪಂಚಾಯತ್ ಬಿಜೆಪಿ ಗೆದ್ದರೆ ಕಾಂಗ್ರೆಸ್ಸಿಗೆ ದಕ್ಕಿರುವುದು 44 ಪಂಚಾಯತ್ ಮಾತ್ರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು.

ಬಿಜೆಪಿ ಇಂದು ನಗರ ಕೇಂದ್ರಿತ ಪಕ್ಷವೂ ಅಲ್ಲ, ಮೇಲ್ಜಾತಿ ಜನರ ಪಕ್ಷವೂ ಅಲ್ಲ. ಎಲ್ಲಾ ಕಡೆ ನಮ್ಮ ಪಕ್ಷಕ್ಕೆ ಜನರು ಅಧಿಕಾರ ನೀಡಿರುವ ಮಾಹಿತಿಯನ್ನು ಅವರು ನೀಡಿದರು. ಕಾಂಗ್ರೆಸ್‌ ತನ್ನ ಭದ್ರ ಕೋಟೆಗಳಲ್ಲಿ ಕೂಡ ಸೋತಿದೆ. ಅಲ್ಲಿ ಎಸ್ ಡಿ ಪಿ ಐ ಇಲ್ಲವೇ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುವ ಕಾಲದತ್ತ ಮುನ್ನಡೆದಿರುವುದನ್ನು ಸ್ವಾಗತಿಸುವುದಾಗಿ ನಳಿನ್ ಕಟೀಲ್ ಹೇಳಿದರು.

ಈಗಾಗಲೇ ಬಿಜೆಪಿ ಬೆಂಬಲದ 28,400, ಕಾಂಗ್ರೆಸ್‌ನ 24,000, ಜೆಡಿಎಸ್ ನ 18,000, ಇತರ ಪಕ್ಷಗಳ 9,760 ಜನ ಆಯ್ಕೆಯಾದ ಮಾಹಿತಿಯನ್ನು ನಳಿನ್ ಕುಮಾರ್ ಮುಂದಿಟ್ಟರು.

ಕೇಂದ್ರದ ಮೋದಿ ಮತ್ತು ರಾಜ್ಯದ ಯಡಿಯೂರಪ್ಪ ಸರಕಾರ ಮಾಡಿದ ಕೆಲಸಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ರೈತರು ಮತ ನೀಡಿದ್ದಾರೆ, ಹಲವು ರೈತರು ಬಿಜೆಪಿ ಪಕ್ಷದಿಂದ ಗೆದ್ದಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150ರಷ್ಟು ಸ್ಥಾನ ‌ನಮ್ಮದಾಗಲಿದೆ. ರಾಜ್ಯದಲ್ಲಿ ಅಷ್ಟು ವ್ಯಾಪ್ತಿಗೆ ಬಿಜೆಪಿ ಬಲ ವಿಸ್ತರಿಸಿಕೊಂಡಿದೆ ಎಂದು ಅವರು ‌ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಕಸ್ತೂರಿ ಪಂಜ, ರವಿಶಂಕರ್ ‌ಮಿಜಾರ್, ರಾಧಾಕೃಷ್ಣ ಉಪಸ್ಥಿತರಿದ್ದರು.