ಮಂಗಳೂರು:  ಸೈಂಟ್ ಅಲೋಶಿಯಸ್ ಪ್ರಿ ಯೂನಿವರ್ಸಿಟಿ ಮಾಡೆಲ್ ಯುನೈಟೆಡ್ ನೇಷನ್ಸ್(SAPMUN)  ಇದರ ನಾಲ್ಕನೇ ಆವೃತ್ತಿಯ ವಿದ್ಯಾರ್ಥಿ ರಾಯಭಾರಿ ಸಮ್ಮೇಳನ ಸ್ಯಾಪ್ ಮನ್ 2022 ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.

ಕಾಲೇಜಿನ ಪ್ರಾಚಾರ್ಯ ರೆ | ಫಾ | ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಲಾ‌ ಕಾಲೇಜಿನಲ್ಲಿ‌ ಸಂಘಟನಾ ಕೌಶಲ್ಯವನ್ನು ಉದ್ದೀಪನಗೊಳಿಸಲು ಇಂತಹ ವಿದ್ಯಾರ್ಥಿ ಕೇಂದ್ರಿತ ಸಮ್ಮೇಳನ ಅತೀ ಅಗತ್ಯವಾಗಿದೆ. ವಿದ್ಯಾರ್ಥಿಗಳು ಜಾಗತಿಕ ವಿಷಯದ ಬಗ್ಗೆ ಸಂವಾದ ಮಾಡಿ ಆ ಮೂಲಕ ಮೌಲ್ಯವರ್ಧನೆ ಮಾಡಿಕೊಳ್ಳಲು ಇದು ಉತ್ತಮವಾದ ವೇದಿಕೆ ಎಂದರು.

ವಿದ್ಯಾರ್ಥಿಗಳು ಬದಲಾವಣೆಯ ಇಂಜಿನ್: ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳು ಬದಲಾವಣೆಯ ಇಂಜಿನ್ ನಂತೆ ಕಾರ್ಯನಿರ್ವಹಿಸಬೇಕು.  ಸೃಜನಶೀಲ ಕೌಶಲ್ಯ, ಸಾರ್ವಜನಿಕ‌ವಾಗಿ ತೆರೆದುಕೊಳ್ಳಲು ಸಹಕಾರಿಯಾಗುವಂತಹ ವಿಷಯಗಳತ್ತ ಮುಂದುವರಿಯಬೇಕು. ಪ್ರಸಕ್ತ ವಿದ್ಯಮಾನಗಳನ್ನು ಎದುರಿಸಲು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಯ ಕಾರ್ಯವಿಧಾನ ಸರ್ವರಿಗೂ ಅನುಸರಣೀಯ ಮಾದರಿ. ಮಾನವೀಯತೆಯ ಸೋಲಾಗಿರುವ ಬಡತನ, ನಿರುದ್ಯೋಗ ಸಮಸ್ಯೆ, ಯುದ್ಧ ತಡೆಯ ಬಗೆಗಿನ ವಿಚಾರ ಮಂಥನ ಈ ವಿದ್ಯಾರ್ಥಿ ಸಮ್ಮೇಳನದಲ್ಲಿ‌ ನಡೆಯಲಿ ಎಂದು ಶುಭ ಹಾರೈಸಿದರು.

ಸಾಪ್ ಮನ್ ಪ್ರಧಾನ ಕಾರ್ಯದರ್ಶಿ ಲೆತೀಶಿಯಾ ಡಿಕೋಸ್ಟ ಸಾಪ್ ಮನ್ ವಿದ್ಯಾರ್ಥಿ ರಾಯಭಾರಿ ಸಮ್ಮೇಳನಕ್ಕೆ ಚಾಲನೆಯನ್ನಿತ್ತು ವಿದ್ಯಾರ್ಥಿ ರಾಯಭಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿತ್ತಾಧಿಕಾರಿ ರೆ| ಫಾ | ಪ್ರದೀಪ್ ಸಿಕ್ವೇರಾ ಎಸ್ ಜೆ, ಕ್ಯಾಂಪಸ್ ಮಿನಿಸ್ಟರ್ ರೆ| ಫಾ | ಸುಜಯ್ ಡೇನಿಯಲ್‌ ಎಸ್ ಜೆ, ಉಪಪ್ರಾಚಾರ್ಯರಾದ ಶಾಲೆಟ್ ಡಿಸೋಜ, ಮುರಳಿಕೃಷ್ಣ ಜಿ. ಎಂ, ಡೀನ್ ಡಾ.ಪ್ರದೀಪ್ ಎಮ್, ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಸ್ಯಾಪ್ ಮನ್ 2022 ಇದರ ವಿದ್ಯಾರ್ಥಿ ಅಧ್ಯಕ್ಷೆ ಸುಹಾ ಖಾನ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ರಿಶ್ ಚೌಟ ವಂದಿಸಿದರು, ವಿದ್ಯಾರ್ಥಿನಿ ಇನಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.