ಶಕ್ತಿನಗರ, ಮಂಗಳೂರು:  ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 278ನೇ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ಫೆಬ್ರವರಿ 2 ರಂದು ಸಂಜೆ 6.30 ಗಂಟೆಗೆ ನಡೆಯಲಿದೆ. ಅಂದು ಸುರ್ ಸೊಭಾಣ್ ಗಾಯನ ತರಬೇತಿ ಶಾಲೆಯ 70 ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ.  ಕಾರ್ಯಕ್ರಮಕ್ಕೆ ಸೂಪರ್ ಸಿಂಗರ್ ಸೀಜನ್ -5 ಇದರ ವಿಜೇತೆ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಚಾಲನೆ ನೀಡಲಿದ್ದಾರೆ.

ಮಾಂಡ್ ಸೊಭಾಣ್ ಗಾಯನ ಮಂಡಳಿ ಸುಮೇಳ್ ನೇತೃತ್ವದಲ್ಲಿ ಸುರ್ ಸೊಭಾಣ್ ತರಗತಿಗಳು ಕಳೆದ ಆಗಸ್ಟ್ ನಿಂದ ಆರಂಭವಾಗಿದ್ದವು. ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ, ಕೊಂಕಣಿ ಗಾಯನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರು ಪ್ರಧಾನ ತರಬೇತುದಾರರಾಗಿ ಕೊಂಕಣಿ ಗಾಯನದಲ್ಲಿ ಶಾಸ್ತ್ರೀಯ ಶಿಸ್ತು ಹಾಗೂ ಸ್ವರ, ಧ್ವನಿ ನಿಯಂತ್ರಣ, ಹಾಡುಗಾರಿಕೆಯ ತಂತ್ರಗಳನ್ನು ವಿದ್ಯುಕ್ತವಾಗಿ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಹಿಂದೂಸ್ತಾನಿ ಗಾಯನ ಪ್ರಕಾರದ ಮೂಲಭೂತ ಅಂಶಗಳಾದ ಅಲಂಕಾರ, ಆರೋಹ, ಅವರೋಹ, ತಾಟ್, ತಾಲ್ ಮತ್ತು ರಾಗಗಳಾದ ಭೂಪ್, ಬೃಂದಾವನಿ, ಸಾರಂಗ್, ಭೈರವ್, ಬಿಬಾಸ್, ಬಿಹಾಗ್, ಜೀವನ್ ಪುರಿ, ಕಾಫಿ, ಪಟದೀಪ್, ಯಮನ್, ಭಾಗೇಶ್ರಿ ಇತ್ಯಾದಿ ಕಲಿಸಲಾಗಿದೆ. ಅದೇ ರೀತಿ ಕೊಂಕಣಿ ಹಾಡುಗಾರಿಕೆಯ ವಿವಿಧ ಪ್ರಕಾರಗಳಾದ ಲಾಲಿಹಾಡುಗಳು, ಗುಮಟೆ , ಮದುವೆ ಸೊಭಾನೆ, ದೆಕ್ಣಿ ಮತ್ತು ಮಾಂಡೊ ಕಲಿಸಲಾಗಿದ್ದು ಯುವ ಗಾಯಕಿ ಡಿಯೆಲ್ ಡಿಸೋಜ, ಐರಿನ್ ರೆಬೆಲ್ಲೊ ಮತ್ತು ಜಾಸ್ಮಿನ್ ಲೋಬೊ ತರಬೇತಿಯಲ್ಲಿ ಸಹಕರಿಸಿದ್ದಾರೆ.

ತಮ್ಮ ಕಲಿಕೆಯ ಹತ್ತು ಹಾಡುಗಳನ್ನು ಮಕ್ಕಳು ಹಾಗೂ ಒಂದು ಹಾಡನ್ನು ಅವರ ಪೋಷಕರು ಪ್ರಸ್ತುತಪಡಿಸಲಿದ್ದಾರೆ. ಹದಿನಾಲ್ಕು ವಿದ್ಯಾರ್ಥಿಗಳು ನಿರೂಪಣೆ ಮಾಡಲಿದ್ದು, ಸಂಗೀತದಲ್ಲಿ ರಸ್ಸೆಲ್ ರಾಡ್ರಿಗಸ್, ಅಶ್ವಿಲ್ ಕುಲಾಸೊ, ಸೆನೊರಾ ಕುಟಿನ್ಹಾ, ಗ್ಲೆನನ್ ಡಿಸೋಜ ಮತ್ತು ಶರ್ವಿನ್ ಪಿಂಟೊ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ.