ಧರ್ಮಸ್ಥಳ: ನ.17: “ಶರೀರ ಮಾಧ್ಯಂ ಖಲು ಧರ್ಮ ಸಾಧನಂ” ಎಂಬ ಸಂಸ್ಕೃತ  ನುಡಿಯಂತೆ ಶರೀರ ಧರ್ಮ ಕಾರ್ಯ ಮಾಡುವುದಕ್ಕೆ ಮಾಧ್ಯಮವಾಗಿದೆ. ಅಂತೆಯೇ ಮನಸ್ಸುಕೂಡಾ ಅಷ್ಟೇ ಪ್ರಬಲವಾಗಿ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಸೈನಿಕರುಕೊರೆಯುವ ಚಳಿ, ಎದುರಾಗುವ ಅಪಾಯಗಳನ್ನು ಎದುರಿಸಲು ದೇಶಪ್ರೇಮದ ಜೊತೆಗೆ ದೇಹ ಮತ್ತು ಮನಸ್ಸುಎರಡೂ ಪ್ರಮುಖ ಕಾರಣವಾಗುತ್ತದೆ.ತಮ್ಮಕರ್ಮವನ್ನು ತೃಪ್ತಿಯಿಂದ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಮಾಡಿದಾಗ ಸ್ವತ: ನಮ್ಮಲ್ಲಿ ಆತ್ಮ ಸಂತೋಷವನ್ನು ಪಡೆಯಬಹುದು. ‘ಶೌರ್ಯ’ ವಿಪತ್ತು ನಿರ್ವಹಣೆ ತಂಡದವರು ಅವರು ಮಾಡುವ ಕೆಲಸವನ್ನು ಪ್ರವೃತ್ತಿಯಾಗಿ ಬದ್ಧತೆಯಿಂದ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಸಾಮಾಜಿಕ ಕಳಕಳಿ ತುಂಬಿ ಮಾನವೀಯತೆಯ ನೆರವು ನೀಡುವುದೇ ಧರ್ಮದ ಸಂದೇಶವಾಗಿದೆ. ಪೂಜೆ, ಪುರಸ್ಕಾರ, ಯಜ್ಞ, ಹೋಮ ಎಲ್ಲವೂ ಆಧ್ಯಾತ್ಮದ ಸ್ವರೂಪ. ಆದರೆ ಸೇವೆ ಮಾಡುವುದು ಸಾಕ್ಷಾತ್ಕಾರದ ಸ್ಪರೂಪ. ಸ್ವಯಂರಕ್ಷಣೆ ಮಾಡಿಕೊಂಡು ಪರೋಪಕಾರ ಮಾಡಿ”ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. 

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಛೇರಿಯ ಸಭಾಭವನದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿಯ ಸಂಯೋಜಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡುತ್ತಾ“ಶೌರ್ಯ ಕಾರ್ಯಕ್ರಮದ ಹೆಸರುಎಲ್ಲೆಡೆ ಪಸರಿಸಿದೆ. ಬಹಳಷ್ಟು ಜನರ ಉಸಿರು ಉಳಿಸುವ ಕೆಲಸ ತಮ್ಮಿಂದ ಆಗಿರುವುದನ್ನು ವಿವಿಧ ಮಾಧ್ಯಮದಲ್ಲಿ ನೋಡಿ ತುಂಬಾ ಸಂತೋಷವಾಗಿದೆ. ಅತಿವೃಷ್ಟಿ, ಕೊರೊನಾ, ಅಪಘಾತ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ಒಗ್ಗಟ್ಟಿನಿಂದ, ಮಾನವೀಯತೆ ಮತ್ತು ಹೃದಯವಂತಿಕೆಯಿಂದತಾವು ತೊಡಗಿಸಿಕೊಂಡಿರುತ್ತೀರಿ. ಯಾರುಇತರರಿಗಾಗಿ ಕೆಲಸ ಮಾಡುತ್ತಾನೆ ಅವರಿಗೆ ವಿಶೇಷ ಮನ್ನಣೆಇದೆ. ಇದಕ್ಕೆಹರೇಕಳ ಹಾಜಪ್ಪ, ತುಳಸಿಗೌಡಇವರೇ ಸಾಕ್ಷಿಯಾಗಿದ್ದಾರೆ. ಯಾರಾದರೂ ಮಾಡಬಹುದಿತ್ತಲ್ಲಎಂದು ಯೋಚಿಸಿ ಕುಳಿತುಕೊಳ್ಳದೆ ನಾನೇ ಮಾಡುತ್ತೇನೆ ಎಂಬ ಸಮಾಜಕ್ಕಾಗಿ ಮಿಡಿಯುವ ಹೃದಯಇದ್ದಾಗ ಮಾತ್ರಇಂತಹ ಸಾಧನೆ ಮಾಡಲು ಸಾಧ್ಯ.” ಎಂದು ಸಂಯೋಜಕರಿಗೆ ಪ್ರೇರಣೆ ತುಂಬಿದರು. 

ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ರವರು ಮಾತನಾಡಿ ಸಮಾಜದ ಹಿತದೃಷ್ಟಿ, ಮನುಕುಲದ ಪ್ರೀತಿ, ಸಾಮಾಜಿಕ ಸೇವೆ, ವಿಪತ್ತಿನಭಯಭೀತಿಯ ವಾತಾವರಣದಿಂದ ಜನರನ್ನು ಕಾಪಾಡುವ ಸದುದ್ದೇಶವನ್ನು  ಮನಸ್ಸಿನಲ್ಲಿಟ್ಟು ಯುವಜನತೆ ಮುಂದುವರಿದಾಗ ಸದೃಢ ಸಮಾಜ ಕಟ್ಟಬಹುದು. ಈ ವಿಚಾರದಂತೆ ಶೌರ್ಯತಂಡ ಪ್ರಯತ್ನಿಸಬೇಕೆಂದರು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ  ಅನಿಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ  ಜಯಶಂಕರ ಶರ್ಮ ಉಪಸ್ಥಿತರಿದ್ದು, ಉಪಯುಕ್ತವಾದ ಸಲಹೆಗಳನ್ನು ನೀಡಿದರು.