ಸುಳ್ಯ: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ.
ರಜಾದಿನಗಳಲ್ಲಿ ಪರಿಸರ ಅಧ್ಯಯನದೊಂದಿಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಹೇಳಿದರು.
ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಘಟಕದ ವತಿಯಿಂದ ಸುಳ್ಯದ ಜಾಲ್ಸೂರು ವಿನೋಬ ನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶುಭಹಾರೈಸಿ ಮಾತನಾಡಿದರು.
ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ನ. ಸೀತರಾಮ ಉದ್ಘಾಟಿಸಿ ಮಾತನಾಡಿ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಸಂಸ್ಕಾರ ಪಡೆಯಬೇಕೆಂದರು.
ಅವರನ್ನು ಈ ಸಂದರ್ಭದಲ್ಲಿ ಡಾ. ವಾಮನ ರಾವ್ ಬೇಕಲ್ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಕಚುಸಾಪ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕ ಮಾತನಾಡಿ ತರಬೇತಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಅಭಿರುಚಿ ಬೆಳೆಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಕಚುಸಾಪ ಸಂಚಾಲಕಿ ಡಾ.ಶಾಂತಾ ಪುತ್ತೂರು ಯೋಗ ಮತ್ತು ನೈತಿಕ ಶಿಕ್ಷಣ ಮಾಹಿತಿ ನೀಡಿದರು.
ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜಯಪ್ರಸಾದ್ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐದು ದಿನಗಳ ತರಬೇತಿ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿವಿಧ ಸೃಜನಾತ್ಮಕ ಚಟುವಟಿಕೆಗಳು, ವ್ಯಂಗ್ಯ ಚಿತ್ರ ರಚನೆ, ಯೋಗಾಸನಗಳು, ಚುಟುಕು ಕವನ ರಚನೆ,ಮಹಾಪುರುಷರ ಪ್ರೇರಣಾದಾಯಿ ಕತೆಗಳು,ಮನೋಲ್ಲಾಸದ ಆಟಗಳನ್ನು ಸಂಯೋ ಜಿಸಲಾಗಿತ್ತು.