ಮಂಗಳೂರು: ಸಿಒಡಿಪಿ (ರಿ) ಮಂಗಳೂರು ಪ್ರವರ್ತಿತ ಸ್ನೇಹಾ ಮಹಾಸಂಘ ಫಜೀರು ಇದರ ವತಿಯಿಂದ ತೆನೆಹಬ್ಬ (ಮೊಂತಿ ಹಬ್ಬ) ಆಚರಣೆಯ ಬಲಿಪೂಜೆಯನ್ನು ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಗುರು ವಿನ್ಸೆಂಟ್ ಡಿ ಸೋಜರವರು ಅರ್ಪಿಸಿದರು. ಮರಿಯಮ್ಮನವರ ಜೀವನವೂ ನಮಗೆ ಮಾದರಿಯಾಗಲಿ ಎಂದು ಪ್ರವಚನ ನೀಡಿದರು.
ಇದರ ಪ್ರಯುಕ್ತ ಸಭಾಕಾರ್ಯಕ್ರಮವನ್ನು ಫಜೀರು ಚರ್ಚ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಜೀರು ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ| ಅನಿಲ್ ಜೋಯಲ್ ಡಿಸೋಜರವರು ವಹಿಸಿದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಪಡೆದು, ಅದನ್ನು ಪಡೆದುಕೊಂಡರೆ ನಮ್ಮ ಅಭಿವೃದ್ಧಿ ಸಾಧ್ಯ ಎಂದು ಸ್ವ ಸಹಾಯ ಸಂಘದ ಸದಸ್ಯರಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿಸೋಜರವರು ಮಾತನಾಡಿ ಸ್ವ-ಸಹಾಯ ಸಂಘದ ಸಹಕಾರ, ಒಗ್ಗಟ್ಟು ಮತ್ತು ಹಂಚಿಕೊಳ್ಳುವ ಮನೋಭಾವವಿದ್ದರೆ ಯಾವುದೇ ಕೆಲಸ ಕಾರ್ಯಗಳು ಸುಗಮ ಸಾಧ್ಯವೆಂದರು.
ಫಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಮೇರಿ ಫೆರ್ನಾಂಡಿಸ್‍ರವರು ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೊಲಿಗೆ ತರಬೇತಿ ಪಡೆದ ಸದಸ್ಯರಿಗೆ ಪ್ರಗತಿ ಪತ್ರವನ್ನು ಹಂಚಲಾಯಿತು.
ಮರಿಯಮ್ಮನವರ ಜನ್ಮದಿನದ ಪ್ರಯುಕ್ತ ಮರಿಯಮ್ಮನವರಿಗೆ ಪುಷ್ಪಾರ್ಪಣೆ ವಿಧಿಯನ್ನು ಆಚರಿಸಲಾಯ್ತು ಹಾಗೂ ಸಾವಯವ ಕೃಷಿಯಿಂದ ತಯಾರಿಸಲ್ಪಟ್ಟ ದಶಪದಾರ್ಥ ಬೆಸುಗೆಯ ಸಹಭೋಜನವನ್ನು ಏರ್ಪಡಿಸಲಾಯಿತು.
ಸ್ನೇಹಾ ಮಹಾಸಂಘದ ಅಧ್ಯಕ್ಷೆ ಲವೀನಾದಾಂತಿ ಸ್ವಾಗತಿಸಿ, ಕಾರ್ಯದರ್ಶಿ ಬೆರ್ನಾಡ್‍ರವರು ವಂದಿಸಿದರು. ಕಾರ್ಯಕ್ರಮವನ್ನು ಸ್ವ-ಸಹಾಯ ಸಂಘದ ಸದಸ್ಯರಾದ ಅನಿಲ್ ಲೋಬೊರವರು ನಿರೂಪಿಸಿದರು.
ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ರೀಟಾ ಡಿಸೋಜ ಹಾಗೂ ಕಾರ್ಯಕರ್ತೆಯಾದ ಗುಲಾಬಿ ಮೊಂತೇರೊರವರು ಉಪಸ್ಥಿತರಿದ್ದರು.