ಕುಂದಾಪುರ: ಮನುಷ್ಯ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅನೇಕ ಮಾರ್ಗಗಳನ್ನು ಹುಡುಕುತ್ತಾನೆ. ಅಂತೆಯೇ ಹದಿನಾರು ವರ್ಷಗಳ ಹಿಂದೆ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀರಾಧ ಕೃಷ್ಣ ಶೆಟ್ಟಿ ಇವರಿಂದ ನಮ್ಮ ಕುಂದಾಪುರ ಬಳಗ ಹುಟ್ಟಿಕೊಂಡಿತ್ತು. ಇದೀಗ ಬೆಳೆದು ದೇಶವಿದೇಶಗಳಲ್ಲಿರುವ ಸುಮಾರು ಎರಡುವರೆ ಲಕ್ಷ ಸದಸ್ಯರು ಈ ಬಳಗದಲ್ಲಿದ್ದು ಅನೇಕ ವಿಷಯಗಳನ್ನು ಈ ಗುಂಪಿನಲ್ಲಿ ಹಂಚಿಕೊಂಡು ಆತ್ಮೀಯತೆ ಮೆರೆಯುತ್ತಿದ್ದಾರೆ. ಯಾವುದೇ ಜಾತಿ ಮತ ಪಂಥಗಳ ಕಲ್ಮಶವಿಲ್ಲದೇ ಆರೋಗ್ಯಕರ, ಸಮಾಜ ಮುಖಿ ಚಿಂತನೆಗಳಿಂದ ಕೂಡಿರುವ ಈ ಬಳಗದಲ್ಲಿ ಕುಟುಂಬ ಪ್ರೇಮವಿರುವುದು ಇದರ ವೈಶಿಷ್ಟ್ಯವಾಗಿದೆ.
ಅಂತೆಯೇ ಮೇ 11 ರಂದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಬಳಗ ಸ್ನೇಹ ಸಮ್ಮಿಲನವನ್ನು ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ಸೆಂಟರ್‌ನ ಸಭಾಭವನದಲ್ಲಿ ಹಮ್ಮಿಕೊಂಡಿತ್ತು.
ಗುಂಪಿನ ಆಡ್ಮಿನ್ ಶ್ರೀ ರಾಧಕೃಷ್ಣ ಶೆಟ್ಟಿ ಇವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವೀಯಾಗಿ ನಡೆಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ "ನಮ್ಮ ಕುಂದಾಪುರ" ಬಳಗದ ಈ ಸ್ನೇಹ ಸಮ್ಮಿಲನ ಮೈಲಿಗಲ್ಲನ್ನೇ ಸೃಷ್ಠಿಸಿದೆ !
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಕಾಂತ್ ಹೊಳ್ಳ ಇವರು ಈ ಬಳಗದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಈ ಗುಂಪಿನ ಕ್ರಿಯಾಶೀಲ ಸದಸ್ಯ ತಲ್ಲೂರು ನಾರಾಯಣ ಶೆಟ್ಟಿ ,ನಿವೃತ್ತ ಅಧ್ಯಾಪಕ ಶ್ರೀನಿವಾಸ್ ಸೋಮಯಾಜಿ, ಶಾಂತಾ ಹೆಬ್ಬಾರ್, ಸುನೀತಾ ಉಡುಪ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಹರ್ಷವರ್ಧನ ಶೆಟ್ಟಿ ಇವರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಮ್ಮ ಕುಂದಾಪುರ ಬಳಗದ ಸದಸ್ಯರು ಉಪಸ್ಥಿತರಿದ್ದರು.