ಕರಾವಳಿಯಲ್ಲಿ ನಡೆದ ನಿರಂತರ ಜನಾಂದೋಲನದಿಂದ ಈ ಬಾರಿ ಜನ ಬದಲಾಗಿದ್ದಾರೆ. ಕೋಮುವಾದವನ್ನು ಸೋಲಿಸಬೇಕು ಎನ್ನುವ ಜನರ ಅತ್ಯುತ್ಸಾಹದ ಓಟಕ್ಕೆ ಪೂರಕವಾಗಿ ಕಾಂಗ್ರೆಸ್ ಹೆಜ್ಜೆ ಹಾಕುತ್ತಿಲ್ಲ !
ಈ ಬಾರಿ ಕೋಮುವಾದದ ಅಪಾಯಗಳ ಬಗ್ಗೆ ಜನರಿಗೆ ಖುದ್ದು ಅರಿವಾಗುತ್ತಿದೆ. "ಹಿಂದುತ್ವ ಎನ್ನುವುದು ನಮ್ಮ ಬದುಕಿನ ಅವಕಾಶಗಳು ಕಸಿಯುತ್ತಿದೆ. ಉದ್ಯೋಗ, ಶಿಕ್ಷಣ, ಹಸಿವು, ವಸತಿ ಸೇರಿದಂತೆ ಬದುಕಿನ ಮೂಲಭೂತ ಸಮಸ್ಯೆಗಳನ್ನು ಮರೆಮಾಚಲು ನಡೆಸುವ ರಾಜಕೀಯ ತಂತ್ರಗಾರಿಕೆಯೇ ಹಿಂದುತ್ವ" ಎಂದು ಕರಾವಳಿಗರಿಗೆ ಅರ್ಥ ಅಗುತ್ತಿದೆ.
ಹಿಂದು ನಾವೆಲ್ಲ ಒಂದು ಎನ್ನುವುದು ಕೆಳ ಜಾತಿಗಳನ್ನು ಮೇಲ್ವರ್ಗದ ಕಾಲಾಳುಗಳನ್ನಾಗಿ ಮಾಡಲು ಪುಸಲಾಯಿಸುವ ಘೋಷಣೆಯಷ್ಟೆ ಎಂಬುದು ಈಗ ಹಿಂದುಳಿದ ವರ್ಗದ ಯುವಕರ ಮಧ್ಯೆ ಪ್ರಜ್ಞೆ ಬೆಳೆಯುತ್ತಿದೆ.
ಬಿಲ್ಲವರ ಸರಣಿ ಸಾವಿಗೆ ಕಾರಣವಾದ ಹಿಂದುತ್ವ ರಾಜಕಾರಣ, ಬ್ಯಾಂಕ್ ಗಳ ತವರೂರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ನಮ್ಮ ಬ್ಯಾಂಕ್ ಗಳನ್ನು ನಷ್ಟದಲ್ಲಿರುವ ಉತ್ತರ ಭಾರತದ ಬ್ಯಾಂಕ್ ಗಳ ಜೊತೆ ಮಾಡಿದ ವಿಲೀನ, ಏರ್ ಪೋರ್ಟ್-ಬಂದರನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು, ಎಂಆರ್ ಪಿಎಲ್- ಎಸ್ ಇಝಡ್ ನಲ್ಲಿ ಸ್ಥಳೀಯರಿಗೆ ಕೆಲಸ ಸಿಗದೇ ಇದ್ದದ್ದು, ನಾರಾಯಣ ಗುರುಗಳಿಗೆ ನಿತ್ಯ ನಿರಂತರ ಅವಮಾನಿಸಿದ್ದು, ಭೂಸ್ವಾಧೀನ, ಸಣ್ಣ ಸೂಕ್ಷ್ಮ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಬಿಲ್ಲವ ಸಮುದಾಯ ಪ್ರಮುಖ ಮುಖಂಡರು ಮುನಿಸಿಕೊಂಡಿದ್ದು, ಮೀನುಗಾರರ ಅಸಮಾದಾನ, ಅಡಿಕೆ ಬೆಳೆಗಾರರ ಆಕ್ರೋಶ, ಸೌಜನ್ಯ ಹೋರಾಟ.... ಇವೆಲ್ಲವೂ ಈ ಬಾರಿ ಕೋಮುವಾದಕ್ಕೆ ಸೋಲುನಿಸುವ ಸಾಧ್ಯತೆ ಇದೆ.
ಮೇಲೆ ಹೇಳಿದ ಇಷ್ಟೂ ವಿಷಯಗಳಲ್ಲಿ ಕರಾವಳಿಯಲ್ಲಿ ಜನಾಂದೋಲನ ನಡೆದಿದೆ. ಆ ಜನಾಂದೋಲನದ ಕಾರಣಕ್ಕಾಗಿಯೇ ಜನಜಾಗೃತಿಯಾಗಿದೆ. ಈ ರೀತಿಯ ಜನಜಾಗೃತಿಯನ್ನು ಮತವನ್ನಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತಿದೆ. ಜನರ ಆಕ್ರೋಶದ ವೇಗಕ್ಕೆ ಕಾಂಗ್ರೆಸ್ ಓಡುತ್ತಿಲ್ಲ. ಕರಾವಳಿಯ ಕಾಂಗ್ರೆಸ್ಸಿಗರು ಅಲ್ಲಲ್ಲಿ ಸಮಾವೇಶ, ಭಾಷಣ, ರೋಡ್ ಶೋಗಳನ್ನು ಮಾಡುವುದು ಬಿಟ್ಟು ತಮ್ಮೊಳಗೇ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ. ದೊಡ್ಡ ದೊಡ್ಡ ನಾಯಕರು ಬಿಡಿ, ಕನಿಷ್ಟ ಇತ್ತಿಚ್ಚೆಗೆ ಯುವ ಜನರ ಮಧ್ಯೆ ಸಂಚಲನ ಮೂಡಿಸಿರುವ ಭಾಷಣಕಾರರಾದ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೊಳ್ಳಿ, ಯು ಟಿ ಫರ್ಝಾನ, ನಜ್ಮಾ ನಝೀರ್, ಭವ್ಯ ನರಸಿಂಹಮೂರ್ತಿ ಮುಂತಾದ ಯುವ ನಾಯಕರನ್ನು ಕರೆಸಿ ಭಾಷಣ ಮಾಡಿಸಿದ್ದರೂ ಸಾಕಿತ್ತು. ಕಾಂಗ್ರೆಸ್ ಅದನ್ನೂ ಮಾಡುತ್ತಿಲ್ಲ.
ಎಡಯುವ ನಾಯಕರಾದ ಮುನೀರ್ ಕಾಟಿಪಳ್ಳ, ಯಾದವಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಬಿ ಎಂ ಭಟ್, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್ ಮುಂತಾದವರು ಮುತುವರ್ಜಿ ವಹಿಸಿ ಕೋಮುವಾದಿ ವಿರೋಧಿಗಳನ್ನು ಒಗ್ಗೂಡಿಸಿ ಈ ಬಾರಿ ಬದಲಾವಣೆ ತರಬೇಕು ಎಂದು ಓಡಾಡುತ್ತಿದ್ದಾರೆ. ಅವರು ನಡೆಸುತ್ತಿರುವ ಅಗ್ರೆಸ್ಸಿವ್ ಪೊಲಿಟಿಕಲ್ ಮೂಮೆಂಟ್ ಗೂ ಕಾಂಗ್ರೆಸ್ಸಿಗರು ತನು ಮನ (ಧನ ನಿರೀಕ್ಷೆ ಮಾಡುವವರಲ್ಲ ಅವರು)ದ ಸಹಕಾರ ನೀಡುತ್ತಿಲ್ಲ.
ಈ ಬಾರಿ ಕರಾವಳಿಯಲ್ಲಿ ಕೋಮುವಾದ ಸೋತರೆ ಅದಕ್ಕೆ ಕಾರಣ ಜನಾಂದೋಲನವೇ ಹೊರತು ಕಾಂಗ್ರೆಸ್ಸಿಗರಲ್ಲ. ಒಂದು ವೇಳೆ ಕೋಮುವಾದಿಗಳೇ ಗೆದ್ದರೆ ಅದು ಜನರ ಸೋಲಲ್ಲ, ಅದು ಕಾಂಗ್ರೆಸ್ ವೈಫಲ್ಯವಷ್ಟೆ. ಕಡಲ ತಡಿಯ ಜನ ಈ ಬಾರಿ ಕೋಮುವಾದ ಮತ್ತು ದುರಾಡಳಿತದ ವಿರುದ್ದವಿದ್ದಾರೆ. ಕಾಂಗ್ರೆಸ್ ನಿದ್ದೆಯಿಂದ ಎದ್ದೇಳಬೇಕು. ಎದ್ದು ಏಡಿ ಬುದ್ದಿ ಬಿಟ್ಟು ಕೆಲಸ ಮಾಡಬೇಕು ಅಷ್ಟೆ !
- ನವೀನ್ ಸೂರಿಂಜೆ