ವಿವಿಧ ಸರಕಾರಗಳು ಅಧಿಕಾರಕ್ಕೆ ಬಂದ ತಕ್ಷಣ ವಿವಿಧ ರೀತಿಯ ಸೌಲಭ್ಯಗಳನ್ನು ತನ್ನ ನಾಗರಿಕರಿಗೆ ಒದಗಿಸಿಕೊಡುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ವಿವಿಧ ಪಕ್ಷಗಳು ತನ್ನ ಪ್ರಜೆಗಳಿಗೆ ಹಲವಾರು ಅತ್ಯಂತ ಉಪಯೋಗಕಾರಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅಂತಹ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಮುಂದಿನ ಪ್ರಜೆಗಳನ್ನು ಸಜ್ಜುಗೊಳಿಸುವ ಮಹತ್ತರ ಜವಾಬ್ದಾರಿ ಇಂದಿನ ಹೆತ್ತವರು ಹಾಗೂ ಸಾರ್ವಜನಿಕರ ಮೇಲಿದೆ.

ಕನ್ನಡ ಮಾಧ್ಯಮದ ಲಾಭ: ಹಲವಾರು ಹೆತ್ತವರ ಮಹದಾಸೆಯಂತೆ ಸರಕಾರವೇನೋ ಒಂದನೇ ತರಗತಿಯಿಂದಲೇ ಕೆಲವಾರು ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಕಲಿಕೆಯನ್ನು ಪ್ರಾರಂಭಿಸಿತು. ಇದರಿಂದಾಗಿ ಮುಚ್ಚಲು ಪ್ರಾರಂಭವಾಗಿದ್ದ ಹಲವಾರು ಸರಕಾರಿ ಪ್ರಾಥಮಿಕ ಶಾಲೆಗಳು ಮತ್ತೆ ತೆರೆಯಲ್ಪಟ್ಟು ಮಕ್ಕಳ ಸಂಖ್ಯೆ ಹೆಚ್ಚಿ ನಲಿ-ಕಲಿಯಲ್ಲಿ ನಲಿದಾಡ ಹತ್ತಿದವು. ಇದೇ ಸಂದರ್ಭದಲ್ಲಿ ಅಂತಹ ಶಾಲೆಗಳಲ್ಲಿರುವ ಶಿಕ್ಷಕರು ಮುತುವರ್ಜಿ ವಹಿಸಿ ಪ್ರಚಾರ ಮಾಡಿದ ಕಾರಣ ಕನ್ನಡ ಮಾಧ್ಯಮವು ಕೂಡ ಉಳಿಯಲು ಬೆಳೆಯಲು ಸಾಧ್ಯವಾಯಿತು. ಕಾರಣ ಇಷ್ಟೇ ಸರಕಾರ ಕನ್ನಡ ಮಾಧ್ಯಮಕ್ಕೆ ಉತ್ತೇಜನ ಕೊಡುವ ದೃಷ್ಟಿಯಿಂದ 15 ಅಂಕಗಳ ಗ್ರೇಸ್ ಮಾರ್ಕ್ ಅನ್ನು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಕಲಿತ ಅಭ್ಯರ್ಥಿಗೆ ದಯಪಾಲಿಸಿತು. ಇದು ಆತನ ಪ್ರತಿಯೊಂದು ಹಂತದಲ್ಲಿ ಆತನಿಗೆ ಲಾಭಕರವಾಗಿ ಪರಿಣಮಿಸಿತು. ಇದರಿಂದಾಗಿ ಇಂದು ಹಲವಾರು ಮಂದಿ ಪೂರ್ತಿ ಹತ್ತು ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಅಥವಾ ಆರು ಯ ಎಂಟನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಕಲಿತವರಿಗಿಂತ ಉದ್ಯೋಗದಲ್ಲಿ ಪ್ರಾತಿನಿಧ್ಯ ವನ್ನು ಪಡೆಯಲು ಸಾಧ್ಯವಾಗಿದೆ .ಆದುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಒಂದರಿಂದ ಹತ್ತನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿಯೇ ಕಲಿಯುವಂತೆ ಪ್ರೇರೇಪಿಸಬೇಕು. ಇದರಿಂದಾಗಿ ಮಕ್ಕಳು ಕಲಿತು ಮುಗಿದ ತಕ್ಷಣ ಸರಕಾರಿ ಉದ್ಯೋಗ ಪಡೆಯಲು ಅತಿ ಹೆಚ್ಚು ಸಾಧ್ಯತೆಯನ್ನು ಕರ್ನಾಟಕದಲ್ಲಿ ಹೊಂದಿರುತ್ತಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದರಿಂದ ಮಗು ಹೆಚ್ಚು ಜವಾಬ್ದಾರಿಯುತವಾಗಿ, ಸಾಮಾಜಿಕವಾಗಿ, ಸಂಸ್ಕೃತಿಕವಾಗಿ ಬೆಳೆಯಲು ಸಾಧ್ಯವಿದೆ. ಏಕೆಂದರೆ ತನ್ನ ಸುತ್ತಲಿನ ಸಂಪೂರ್ಣ ಪರಿಜ್ಞಾನವನ್ನು ತನ್ನ ಮಾತೃಭಾಷೆಯಲ್ಲಿಯೇ ಸಮರ್ಥವಾಗಿ ಪಡೆಯಲು ಮಗುವಿಗೆ ಸಾಧ್ಯವಾಗುತ್ತದೆ. ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ, ಅಭಿವೃದ್ಧಿಗೆ ಅತ್ಯಂತ ಅಭೂತ ಪೂರ್ವ ಅವಕಾಶಗಳನ್ನು ನೀಡುತ್ತದೆ. ತನ್ನ ಸುತ್ತಲಿನ ಸಾಮಾಜಿಕ ಪರಿಸ್ಥಿತಿ, ಸಾಂಸ್ಕೃತಿಕ ರೀತಿ, ನೀತಿ, ರಿವಾಜು, ಕ್ರಮಗಳನ್ನು ಬಹಳ ಸರಳವಾಗಿ ಅರ್ಥೈಸಿಕೊಳ್ಳಲು ಮಗುವಿಗೆ ಸಾಧ್ಯವಾಗಿ ತನ್ನನ್ನು ಅದರಲ್ಲಿ ಒಳಗೊಳಿಸಿಕೊಂಡು ಆಲೋಚಿಸಲು ಸಾಧ್ಯವಾಗುತ್ತದೆ. ಆದುದರಿಂದಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಿಂತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಸ್ವಂತ ಉದ್ಯಮ, ಸ್ವಂತ ವಾಣಿಜ್ಯ, ಸ್ವಂತ ಕೈಗಾರಿಕೆಗಳಲ್ಲಿ ಯಶಸ್ಸನ್ನು ಸಾಧಿಸಿರುವುದನ್ನು ನಾವು ಸಮಾಜದಲ್ಲಿ ನಮ್ಮ ಕಣ್ಣಾರೆ ಕಾಣಬಹುದಾಗಿದೆ. ಮಕ್ಕಳು ಸ್ವಂತ ಆಲೋಚನೆ, ಸ್ವ ಅನುಭವ ಇತ್ಯಾದಿಗಳನ್ನು ಬೆಳೆಸಿಕೊಳ್ಳಲು ಒತ್ತಡವಿಲ್ಲದ ಆರಾಮ ಕಲಿಕೆಯ ಕನ್ನಡ ಮಾಧ್ಯಮ ಪೂರಕ, ಪ್ರೇರಕ ಎಂದರೆ ತಪ್ಪಿಲ್ಲ ಒಪ್ಪೇ ಎಲ್ಲಾ.

ಗ್ರಾಮೀಣ ಕೃಪಾಕಾಂಕದ ಲಾಭ: ಸಾಮಾನ್ಯವಾಗಿ ನಮಗೆಲ್ಲ ತಿಳಿದಂತೆ ಭಾರತ ಗ್ರಾಮೀಣ ಪ್ರದೇಶಗಳೆ ಹೆಚ್ಚಿರುವ ದೇಶ. ಹೀಗಾಗಿ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ದೊರಕದಿರುವ ಸೌಲಭ್ಯಗಳನ್ನು ಲೆಕ್ಕ ಹಾಕಿ ಮೊದಲು 15 ಕೃಪಾಂಕಗಳ ಒದಗಿಸಿತು. ಆದರೆ ಗ್ರಾಮೀಣ ಜನರ ಒತ್ತಾಯಕ್ಕೆ ಮಣಿದು ಇದೀಗ ಎಲ್ಲ ರೀತಿಯ ಸಂದರ್ಭಗಳಲ್ಲಿಯೂ 20 ಅಂಕಗಳ ಗ್ರಾಮೀಣ ಕ್ರಪಾಂಕವನ್ನು ಗ್ರಾಮೀಣ ಪ್ರದೇಶದಲ್ಲಿ ಒಂದರಿಂದ ಹತ್ತನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ನೀಡುತ್ತಿದೆ.

ಆದರೆ ವಿದ್ಯಾರ್ಥಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿಯೇ ಒಂದರಿಂದ 10ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿರಬೇಕಾಗುತ್ತದೆ. ಒಂದು ವೇಳೆ ಆರನೇ ತರಗತಿ, 8 ಅಥವಾ 9ನೇ ತರಗತಿಗೆ ಪಟ್ಟಣ ಅಥವಾ ನಗರ ಅಥವಾ ಪುರಸಭಾ ಪ್ರದೇಶದ ಶಾಲೆಗಳಿಗೆ ಸೇರ್ಪಡೆಯಾದಲ್ಲಿ ಬೇಕಿದ್ದರೆ ಒಂದೇ ಒಂದು ದಿನಕ್ಕೆ ಸೇರ್ಪಡೆಯಾಗಿ ಸ್ಯಾಟ್ಸ ನಲ್ಲಿ ದಾಖಲೆಗೊಂಡಲ್ಲಿ ಕೂಡ ಆತ ತನಗೆ ಸಿಗಬಹುದಾಗಿದ್ದ ಗ್ರಾಮೀಣ ಕ್ರತಾಂಕವನ್ನು ಕಳೆದುಕೊಳ್ಳುತ್ತಾನೆ. ಆದುದರಿಂದ ಗ್ರಾಮೀಣ ಪ್ರದೇಶದಲ್ಲಿ ಕಿರಿಯ ಅಥವಾ ಹಿರಿಯ ಪ್ರಾಥಮಿಕ ಶಾಲೆಯನ್ನು ಕಲಿತ ಮಕ್ಕಳು ಯಾವುದೇ, ಎಂತಹದ್ದೇ ಸಂದರ್ಭ ಬಂದರು ಕೂಡ ಪಟ್ಟಣ ಅಥವಾ ನಗರ ಅಥವಾ ಪುರಸಭಾ ಪ್ರದೇಶದ ಶಾಲೆಗಳತ್ತ ಮುಖ ಮಾಡಬಾರದು. ಒಂದು ವೇಳೆ ಈ ರೀತಿ ಗ್ರಾಮೀಣ ಪ್ರದೇಶದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದೆ ಆದಲ್ಲಿ ಅಂತಹ ವಿದ್ಯಾರ್ಥಿ ಕಲಿಕೆಯ ತರುವಾಯ ಸರಕಾರಿ ಉದ್ಯೋಗವನ್ನು ಪಡೆಯುವರೆ ಬಹಳಷ್ಟು ಸುಲಭ ದಾಯಕವಾಗುತ್ತದೆ.

ಹೀಗೆ ಗ್ರಾಮೀಣ ಕೃಪಾಂಕ ಮತ್ತು ಕನ್ನಡ ಮಾಧ್ಯಮದ ಕೃಪಾಂಕ ಎರಡನ್ನೂ ಕೂಡ ಹೊಂದಿದರಂತೂ ಅಂತಹ ವಿದ್ಯಾರ್ಥಿ ಅಭೂತಪೂರ್ವ ಯಶಸ್ಸನ್ನು ಸರಕಾರಿ ಉದ್ಯೋಗವನ್ನು ಪಡೆಯುವಲ್ಲಿ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಹೆತ್ತವರು ಹಾಗೂ ಸಾಮಾನ್ಯರು ಸರಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡವನೇ ಜಾಣರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು,ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜ ಕುಮಾರ್ ಮೂಡುಬಿದಿರೆ.