ವೀಕ್ಷಕ ವರದಿ: ರಾಯಿ ರಾಜ ಕುಮಾರ್, ಮೂಡುಬಿದಿರೆ.


ಸುಮಾರು 30-40 ವರ್ಷಗಳ ಹಿಂದಿನ ದಿನಗಳಲ್ಲಿ ಚುನಾವಣೆಗೆ ನಾಮಪತ್ರ ಹಾಕಿದಾಕ್ಷಣ ಊರಿನಲ್ಲಿದ್ದ ರಿಕ್ಷಾ, ಕಾರು, ಜೀಪುಗಳು ಹೋಗಲು ಸಾಧ್ಯವಿರುವ ಎಲ್ಲ ಸ್ಥಳಗಳಿಗೂ ನುಗ್ಗುತ್ತಿದ್ದವು. ಆ ವಾಹನದ ನಾಲ್ಕು ಬದಿಗಳಲ್ಲಿ ಅಭ್ಯರ್ಥಿಯ ಚಿತ್ರ, ಚಿನ್ನ, ಎರಡು-ನಾಲ್ಕು ಮೈಕಗಳು ಕಟ್ಟಲ್ಪಟ್ಟು ಊರಿಡಿ ಪ್ರತಿದಿನ ತಿರುಗಾಡಿ, ಬೊಬ್ಬೆ ಹೊಡೆದು, ಮತದಾರರಿಗೆ ಅಭ್ಯರ್ಥಿ ಚಿನ್ನೆಯ ನೆನಪು ಉಂಟು ಮಾಡುತ್ತಿದ್ದವು. ಇದಕ್ಕೆ ಪೂರಕವಾಗಿ ಕೆಲವಾರು ಅಭ್ಯರ್ಥಿಗಳು ತಮ್ಮ ಚಿತ್ರ, ಚಿನ್ನೆ ಇರುವ ಕರಪತ್ರಗಳನ್ನು ಮುದ್ರಿಸಿ ವಾಹನಗಳ ಮೂಲಕ ಎಸೆಯುತ್ತಲೂ ಇದ್ದರು. ಹಳ್ಳಿಯ ಮಕ್ಕಳು ಆ ಕರಪತ್ರವನ್ನು ಹಿಡಿಯುವ ರಭಸದಲ್ಲಿ ವಾಹನದ ಹಿಂದೆ ಓಡಿ ಬರುತ್ತಾ ಬಿದ್ದು ಕೈ ಮೈ ಪರಚಿಕೊಂಡರೂ ಕರಪತ್ರ ಸಿಕ್ಕಿದರೆ ಆ ನೋವುಗಳೆಲ್ಲ ನಗಣ್ಯವಾಗಿ ಹೆಮ್ಮೆಯಿಂದ ಬೀಗುತ್ತಿದ್ದ ದಿನಗಳು ಇದ್ದವು. ತಿಂಗಳಾನುಗಟ್ಟಲೆ ನಡೆಯುತ್ತಿದ್ದ ಈ ರೀತಿಯ ಕ್ರಿಯಾ ನೋಟಗಳು ದಿನಗಳಿದಂತೆ ಕಡಿಮೆಯಾಗ ಹತ್ತಿತು. 

ಪತ್ರಿಕಾ ಮಾಧ್ಯಮದಲ್ಲಿ ವಿವಿಧ ರೀತಿಯ ಪತ್ರಿಕೆಗಳು ಬೆಳೆದಂತೆಲ್ಲ ಕೂಗಿ, ಕರೆದು, ಎಚ್ಚರಿಸುವ, ಬೊಬ್ಬೆ ಇಡುವ, ಸಂಪ್ರದಾಯಗಳು ಕಡಿಮೆಯಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಿಷಯವನ್ನು ತಿಳಿಸುವ ಕ್ರಮ ಹೆಚ್ಚಿತು. ಇದು ಎಷ್ಟರ ಮಟ್ಟಿಗೆ ಪ್ರಭಾವ ಯುತವಾಗಿ ತಿಂದರೆ ಚುನಾವಣಾ ಘೋಷಣೆ ಆದ ತರುವಾಯ ಪತ್ರಿಕೆಗಳ ಓದುಗರ ಸಂಖ್ಯೆಯೂ ಹೆಚ್ಚಿ ವಿವಿಧ ಪತ್ರಿಕೆಗಳ ಓದು, ಅಭಿಪ್ರಾಯ, ಚರ್ಚೆಗೂ ಅವಕಾಶವನ್ನು ಒದಗಿಸಿತು. ಇದೇ ಸಂದರ್ಭದಲ್ಲಿ ಕೆಲವಾರು ಅಭ್ಯರ್ಥಿಗಳು ತಮ್ಮ ಫೋಟೋ ಮತ್ತು ಜಾಹೀರಾತಿನ ದೊಡ್ಡ ದೊಡ್ಡ ಕಟೌಟ್ಗಳನ್ನು ವಿಷಯ ವಿಚಾರಗಳನ್ನು ನಾಲ್ಕು ರಸ್ತೆ ಸೇರುವ ಸ್ಥಳದಲ್ಲಿಟ್ಟು ಪ್ರಚಾರ ಮಾಡಲು ಪ್ರಾರಂಭಿಸಿದರು. ಕೆಲವರು ಅಭ್ಯರ್ಥಿಗಳು ತಮ್ಮ ಕರಪತ್ರವನ್ನು ಪತ್ರಿಕೆಯ ಒಳಗಿಟ್ಟು ಅಥವಾ ಅಂಚೆ-ಪೇದೆಯ ಮೂಲಕ ಪ್ರತಿ ಮನೆಗೂ ತಲುಪಿಸುವ ನೂತನ ವಿಧಾನವನ್ನು ಕಂಡುಕೊಂಡರು. ಈ ಎಲ್ಲದರೊಂದಿಗೆ ಅಭ್ಯರ್ಥಿಗಳು ತಮ್ಮ ಹಿಂಬಾಲಕರೊಂದಿಗೆ ಗುಂಪು ಕೂಡಿಕೊಂಡು ಎರಡು ಮೂರು ಬಾರಿ ಮತದಾರರನ್ನು ಸಂಧಿಸಿ ವೈಯಕ್ತಿಕವಾಗಿ ಭೇಟಿ ಮಾಡಿ ವಿನಂತಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಈ ಎಲ್ಲಾ ಪ್ರಯತ್ನಗಳ ನಡುವೆಯೂ ಕೆಲವಾರು ಬಾರಿ ಚಲನಚಿತ್ರ, ಸಾಮಾಜಿಕ, ರಾಜಕೀಯ ಸ್ಟಾರ್ಗಳನ್ನು ಕರೆಸಿ ಪ್ರಭಾವ ಬೀರುವ ಮಹತ್ತರ ಕ್ರಮವನ್ನು ಮಾಡಲು ಪ್ರಾರಂಭಿಸಿದರು.

ಕಾಲ ಬದಲಾದಂತೆ ಪತ್ರಿಕಾ ಮಾಧ್ಯಮಕ್ಕಿಂತ ಹೆಚ್ಚು ಪ್ರಭಾವ ಯುತ ಹಾಗೂ ಪರಿಣಾಮಕಾರಿ ದೃಶ್ಯ ಶ್ರವ್ಯ ಮಾಧ್ಯಮಗಳಾದ ಟಿವಿ, ಮೊಬೈಲುಗಳು ಹೆಚ್ಚು ಪ್ರಚಲಿತವಾದವು. ಟೀವಿ ಮೊಬೈಲುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಂತೆ ಅತ್ಯಂತ ವ್ಯಾಪಕತೆ ಹಾಗೂ ಹೆಚ್ಚು ಜನರನ್ನು ತಲುಪುವ ಮತ್ತು ಯಥಾವತ್ ಚಿತ್ರವನ್ನು ಒದಗಿಸುವ ಎಲ್ಲವನ್ನು ಸಮರ್ಥವಾಗಿ ವಿಷದೀಕರಿಸುವ ಅತ್ಯುತ್ತಮ ಮಾಧ್ಯಮವಾಗಿ ಅವುಗಳು ಮುನ್ನೆಲೆಗೆ ಬಂದವು. ಇದರಿಂದಾಗಿ ಯಾರು, ಏನು, ಹೇಗೆ ಎನ್ನುವ ಎಲ್ಲ ಮಾಹಿತಿಗಳೊಂದಿಗೆ ಯಾವ ಯಾವ ಪಕ್ಷಗಳು ಎಷ್ಟರಮಟ್ಟಿಗೆ ಎಲ್ಲೆಲ್ಲಿ ತಪ್ಪಿದ್ದಾವೆ, ಯಾರು ಯಾರ ಮೇಲೆ ಮಾಡಿದ ಅಪಾದನೆಗಳಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ಎನ್ನುವ ಸಂಪೂರ್ಣ ವಿಚಾರ ಮತದಾರನ ಎದುರು ಸಂಪೂರ್ಣವಾಗಿ ತೆರೆದುಕೊಂಡು ಸತ್ಯ ಸತ್ಯತೆಯ ಸಂಪೂರ್ಣ ಮಾಹಿತಿ ಮತದಾರನಿಗೆ ಆಗಿಂದಾಗೆ ಸಿಗಲು ಸಾಧ್ಯವಾಯಿತು. ಎಲ್ಲವೂ ತೆರೆದ ಪುಸ್ತಕದಂತಾಗಿರುವ ಕಾರಣ ಪ್ರತಿಯೊಂದನ್ನು ಮತದಾರ ಮತದಾನಕ್ಕೆ ಮೊದಲೇ ಅಳೆದು ತೂಗಿ ನಿರ್ಧರಿಸುವ ಪ್ರೌಢತೆಗೆ ಇಂದು ಬಂದಿರುತ್ತಾನೆ. ಈ ಪ್ರೌಢತೆಯಿಂದಾಗಿ ಕೇಂದ್ರದಲ್ಲಿ ಒಂದು ಪಕ್ಷವಿದ್ದರೆ, ರಾಜ್ಯದಲ್ಲಿ ಒಂದು ಪಕ್ಷ, ಸ್ಥಳೀಯವಾಗಿ ಮತ್ತೊಂದು ಪಕ್ಷ ಎನ್ನುವ ವಿವಿಧತೆ ನಮಗೆ ಗೋಚರಿಸುತ್ತಿದೆ. ಹೀಗಾಗಿ ಯಾವುದೇ ಹಂತದಲ್ಲೂ ಕೂಡ ಮತದಾರ ಯಾರದೇ ಮುಲಾಜಿಗೂ ಒಳಗೊಳ್ಳದೆ ತಾನೇ ಸ್ವತಹ ನಿರ್ಧರಿಸಿ ನಿರ್ಣಯಿಸುವ ಹಂತಕ್ಕೆ ಬೆಳೆದಿದ್ದಾನೆ ಎಂದರೆ ಅದು ತಪ್ಪಾಗಲಾರದು.

ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯ ತನಕದ ಎಲ್ಲವನ್ನು ಕಂಡುಕೊಳ್ಳುವ ಇಂದಿನ ಮತದಾರ ಬಹಳ ಜಾಣ್ಮಯ ಹಂತಕ್ಕೆ ಬೆಳೆದಿದ್ದಾನೆ. ಇಂದು ಅಭ್ಯರ್ಥಿಗಳು ನಾಮಪತ್ರ ಹಾಕುವಾಗ ಮಾತ್ರ ಕಂಡುಬರುವ ಕಟ್ಟಾ ಬೆಂಬಲಿಗರ ಗೌಜಿನ ಗಮ್ಮತ್ತಿನ ತರುವಾಯ ಯಾವುದೇ ರೀತಿಯ ಪ್ರತಿಕ್ರಿಯೆಯನ್ನಾಗಲಿ ಇಂದಿನ ದಿನಗಳಲ್ಲಿ ಮತದಾರ ತೋರುತ್ತಿಲ್ಲ. ಅದರಲ್ಲೂ ಬಿಸಿಲಿನ ಝಳಪು ಹೆಚ್ಚಾದಂತೆ ಮತದಾರ ಕೂಡ ಕಂಬಳಿ ಹೊತ್ತು ಮಗುಮ್ ಆಗಿ ಮಲಗಿದವರಂತೆ ಬಹಳ ಮೌನವಾಗಿ ಮನಸ್ಸಿನಲ್ಲಿ ಮಂಡಿಗೆಯನ್ನು ತಿನ್ನುತ್ತಿದ್ದಾನೆ. ಅಂತೂ ಬಿಸಿಲಿನ ಕಾವು ಎಲ್ಲರ ಬೆವರನ್ನು ಹರಿಸುತ್ತಿದೆ. ಬೆವರನ್ನು ಒರೆಸುವ ತರಾತುರಿಯಲ್ಲಿ ಎರಡು ಕೈಗಳಲ್ಲಿ ಕರ್ಚೀಫ್ ಮಾತ್ರ ನೇತಾಡುತ್ತಿದೆ. ಪಕ್ಷದ ಧ್ವಜ ಹಿಡಿಯಲು ಮತದಾರನಿಗೆ ಸಾಧ್ಯವಾಗದಂತೆ ಬಿಸಿಲು ಬೆವರನ್ನು ಇಳಿಸುತ್ತಿದೆ. ಮುಂದೇನಿದೆಯೋ ನೋಡೋಣ.