ಅತ್ತೂರು, ಕಾರ್ಕಳ: ಜನವರಿ 18 ರಂದು ಆರಂಭಗೊಂಡ ಅತ್ತೂರು ಕಾರ್ಕಳ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಬುಧವಾರ ದಿನದ ಐದೂ ಬಲಿಪೂಜೆಗಳು ಸುಸೂತ್ರವಾಗಿ ನೆರವೇರಿಸಲ್ಪಟ್ಟವು. ಇದರೊಂದಿಗೆ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ, ಪವಿತ್ರ ಅವಶೇಷದ ಅಶೀರ್ವಾದ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಮೊಂಬತ್ತಿಗಳನ್ನು ಹೊತ್ತಿಸಲು ಹಾಗೂ ಸಂತ ಲಾರೆನ್ಸರ ಪವಾಡಮೂರ್ತಿಗೆ ಗೌರವ ಸಲ್ಲಿಸಲು ಭಕ್ತಾದಿಗಳು ಆಗಮಿಸಿದ್ದರು.
ದಿನದ ಬಲಿಪೂಜೆಗಳನ್ನು ಕಣಜಾರಿನ ಫಾದರ್ ಅಲೆಕ್ಸಾಂಡರ್ ಲುವಿಸ್, ಕುಪ್ಪೆಪದವಿನ ಫಾದರ್ ಗ್ರೇಶನ್ ಆಲ್ವಾರಿಸ್, ಉಡುಪಿಯ ಫಾದರ್ ಆಶ್ವಿನ್ ಆರಾನ್ಹಾ, ಪೆರಂಪಳ್ಳಿಯ ಫಾದರ್ ಅನಿಲ್ ಡಿ’ಸೋಜಾ ಹಾಗು ಪಕ್ಷಿಕೆರೆಯ ಫಾದರ್ ಮೆಲ್ವಿನ್ ನೊರೋನ್ಹಾರವರು ನೆರವೇರಿಸಿದರು. ಈ ಬಲಿಪೂಜೆಗಳಲ್ಲಿ ಮಂಗಳೂರು, ಉಡುಪಿ ಹಾಗೂ ಇತರ ಧರ್ಮಪ್ರಾಂತಗಳಿಂದ ಆಗಮಿಸಿದ ಬಹಳಷ್ಟು ಗುರುಗಳು ಪಾಲ್ಗೊಂಡರು.
ಮಹೋತ್ಸವದ ನಾಲ್ಕನೇ ದಿನವಾದ ಗುರುವಾರದಂದು ಎಂದಿನಂತೆ ಬೆಳಗ್ಗೆ 8, 10, 12 ಹಾಗೂ ಮಧ್ಯಾನ್ಹ 3 ಮತ್ತು 5 ಗಂಟೆಗೆ ಬಲಿಪೂಜೆಗಳು ನೆರವೇರಲಿರುವುವು.