ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ತಾಲೂಕಿನ ತೆಂಕ ಮಿಜಾರು, ಬಡಗ ಮಿಜಾರು, ನಿಡ್ಡೋಡಿ, ಮುಚ್ಚೂರು ಇತ್ಯಾದಿ ಎಲ್ಲ ಗ್ರಾಮಗಳ ನಡುವಿನ ಪ್ರದೇಶಗಳಲ್ಲಿ ಮೆಸ್ಕಾಂ ನವರು ಟವರ್ ನಿರ್ಮಾಣ ಮಾಡಿದ್ದಾರೆ. ಈ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲುಗಳ ಗಣಿಗಾರಿಕೆಯನ್ನು ಅಧಿಕಾರಿಗಳು ನಿಲ್ಲಿಸಿದರು. 

ಆದರೆ ಅದರ ಸಮೀಪದ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಬಾಕ್ಸೈಟ್ ಗಾಗಿನ ಅಕ್ರಮ, ಅನಧಿಕೃತ ಗಣಿಗಾರಿಕೆಯನ್ನು ಯಾವ ಅಧಿಕಾರಿಯೂ, ಯಾವ ಪಂಚಾಯತ್ ನ ಅಧ್ಯಕ್ಷ, ಸದಸ್ಯರುಗಳು ತಡೆಯದಿದ್ದುದು ಬಹಳಷ್ಟು ಸಂಶಯ ಮೂಡಿಸುತ್ತದೆ. ಈ ಅಕ್ರಮದಲ್ಲಿ ಅವರೆಲ್ಲರೂ ಭಾಗಿಯಾಗಿರುವ ಸಾಧ್ಯತೆ ಢಾಳಾಗಿ ಕಾಣುತ್ತದೆ. 

ಕೊಲತ್ತಾರು, ಬಲತ್ತಾರು, ಬಂಗೇರ ಪದವು ಗಳೆಲ್ಲವೂ ಈ ರೀತಿಯ ಗಣಿಗಾರಿಕೆಯಲ್ಲಿ ಖಾಲಿಯಾದರೆ ಸುತ್ತಲಿನ ನಾಲ್ಕೂ ಗ್ರಾಮಗಳು, ಅಲ್ಲಿರುವ ಹಚ್ಚ ಹಸಿರಿನ ಗದ್ದೆ, ತೋಟಗಳು ನಿರ್ನಾಮವಾಗಲಿವೆ. ಏಕೆಂದರೆ ಸುತ್ತಲಿನ ನಾಲ್ಕೂ ಗ್ರಾಮಗಳ ಪ್ರದೇಶ ಇಳಿಜಾರಿನಲ್ಲಿದೆ. 

ಭೂಮಿ ಪರಿವರ್ತನೆ ಆಗದೆ, ಗ್ರಾಮ ಪಂಚಾಯತ್ ನ ಅನುಮತಿಯೂ ಇಲ್ಲದೆ ಕಳೆದ ಒಂದೂವರೆ ವರ್ಷದಿಂದ ಗಣಿಗಾರಿಕೆ ನಡೆದು ದಿನಕ್ಕೆ 50-60 ಟನ್, 50-60 ಬೃಹತ್ ಲಾರಿಗಳಲ್ಲಿ ಖಾಸಗಿ, ಸರಕಾರಿ ಎಲ್ಲ ಪ್ರದೇಶಗಳಿಂದ ಮಣ್ಣು, ಕಲ್ಲು ಸಾಗಿಸುತ್ತಿದ್ದರೂ ಊರವರು ಮುಗುಮ್ಮಾಗಿದ್ದರು ಎಂದರೆ ಎಲ್ಲರ ಮೇಲೂ ಸಂಶಯ ಮೂಡಿಸುತ್ತದೆ. ಇಂತಹ ಅನಧಿಕೃತ ಕಟ್ಟಡಕ್ಕೂ ಹಲವಾರು ದಾಖಲೆ ಕೇಳುವ ಮೆಸ್ಕಾಂ ರಾತ್ರೋರಾತ್ರಿ ಸಂಪರ್ಕ ನೀಡಿದೆ ಎಂದರೆ ಎಷ್ಟು ಪ್ರಭಾವಶಾಲಿಗಳು ಇದರ ಹಿಂದಿದ್ದಾರೆ ಎಂದು ಊಹಿಸಬಹುದು.

ಇದರ ಹಿಂದೆ ಕೋಟಿಗಟ್ಟಲೆ ಹಣ ಕೈ ಬದಲಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ರಾಜ್ಯ ಮಟ್ಟದ ಉನ್ನತ ತನಿಖೆ ಅಗತ್ಯವಿದೆ.