ಉಜಿರೆ: ಗ್ರಾಮೀಣ ಸ್ವ-ಉದ್ಯೋಗತರಬೇತಿ ಸಂಸ್ಥೆಗಳ (ಆರ್‍ಸೆಟಿ) ಮೂಲಕ ನಿರುದ್ಯೋಗಿಯುವಜನತೆಗೆ ಸಕಾಲಿಕ ಮಾಹಿತಿ, ತರಬೇತಿ ಹಾಗೂ ಮಾರ್ಗದರ್ಶನದೊಂದಿಗೆ ಸ್ವ-ಉದ್ಯೋಗ ಮಾಡಿ ಆತ್ಮವಿಶ್ವಾಸದಿಂದ ಸ್ವಾವಲಂಬಿ ಜೀವನ ನಡೆಸುವಂತೆ ನಿರಂತರ ಸ್ಪೂರ್ತಿ, ಪ್ರೇರಣೆ ನೀಡಲಾಗುತ್ತದೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಮಂಗಳವಾರ  ಧರ್ಮಸ್ಥಳದಲ್ಲಿ ರುಡ್‍ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿ ಆಶ್ರಯದಲ್ಲಿ ಆರ್‍ಸೆಟಿ ನಿರ್ದೇಶಕರುಗಳಿಗೆ ಉದ್ಯಮ ಶೀಲತಾಭಿವೃದ್ಧಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ನಿರುದ್ಯೋಗಿಗಳು ಸ್ವ-ಉದ್ಯೋಗ ಮಾಡಲುಉತ್ತಮ ಅವಕಾಶ  ಒದಗಿಸಿ, ಧೈರ್ಯ ಮತ್ತುಆತ್ಮ ವಿಶ್ವಾಸದೊಂದಿಗೆಅವರಿಗೆ ಬೇಕಾದ ತಿಳುವಳಿಕೆ, ತರಬೇತಿ ಹಾಗೂ ಬ್ಯಾಂಕುಗಳಿಂದ ಸಾಲದ ನೆರವು ನೀಡಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಕಲಿತ ಭೂಗೋಳ, ಚರಿತ್ರೆ, ರಸಾಯನಶಾಸ್ತ್ರ ಅವರ ಬದುಕಿಗೆ ಬಳಕೆಯಾಗುವುದಿಲ್ಲ. ಅವರಲ್ಲಿರುವ ಭಯ, ಸಂಶಯ ಹಾಗೂ ಗೊಂದಲ  ನಿವಾರಿಸಿ ಜ್ಞಾನ, ವಿಜ್ಞಾನ ಮತ್ತು ಸುಗಮ ವ್ಯವಹಾರದ ಬಗ್ಯೆ ಅವರಿಗೆ ಅಲ್ಪಾವಧಿ ತರಬೇತಿ  ಹಾಗೂ ಸಮಗ್ರ ಮಾಹಿತಿ ನೀಡಲಾಗುತ್ತದೆ. ತರಬೇತಿ ಬಳಿಕ ಅವರಿಗೆ ಪರೀಕ್ಷೆ ನಡೆಸದೆ ಸ್ವ-ಉದ್ಯೋಗ ಮಾಡಲು ಅರ್ಹತಾ ಪ್ರಮಾಣ ಪತ್ರ ನೀಡಿ ಮುಂದೆಎರಡು ವರ್ಷಗಳ ವರೆಗೆ ನಿರಂತರ ಅನುಪಾಲನೆಯೊಂದಿಗೆ ಬೇಕಾದ ಮಾಹಿತಿ ನೀಡಲಾಗುತ್ತದೆ. ತರಬೇತಿ ಹೊಂದಿದವರಲ್ಲಿ ಶೇ.70 ರಷ್ಟು ಮಂದಿ ಯಶಸ್ವಿ ಸ್ವ-ಉದ್ಯೋಗಿಗಳಾಗಿ ಉತ್ತಮ ಪ್ರಗತಿ ಸಾಧಿಸಿದ್ದಾರೆ.

ಅವರಿಗೆ ಉಚಿತ ಊಟ ಹಾಗೂ ಇತರ ಸೌಲಭ್ಯಗಳೊಂದಿಗೆ ಸನಿವಾಸ ತರಬೇತಿ ನೀಡುವುದರ ಜೊತೆಗೆ ಅವರಿಗೆ ನೈತಿಕ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಜೀವನಕಲೆಯನ್ನೂ ಕಲಿಸಿ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರನ್ನಾಗಿಯೂ ರೂಪಿಸಲಾಗುತ್ತದೆ.ಈ ಬಗ್ಯೆ ಮಾಧ್ಯಮಗಳ ಸಹಕಾರವನ್ನೂ ಹೆಗ್ಗಡೆಯವರು ಸ್ಮರಿಸಿ ಅಭಿನಂದಿಸಿದರು.

ರುಡ್‍ಸೆಟ್ ಸಂಸ್ಥೆಗಳ ನೇಶನಲ್ ಅಕಾಡೆಮಿಯ ಮಹಾ ನಿರ್ದೇಶಕ ಸತ್ಯಮೂರ್ತಿ ಸ್ವಾಗತಿಸಿದರು. ರುಡ್‍ಸೆಟ್ ಸಂಸ್ಥೆಗಳ ಕೇಂದ್ರೀಯ ಆಡಳಿತ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರ್, ಉಜಿರೆ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಸುರೇಶ್, ಎಂ.ಮತ್ತು ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ ಉಪಸ್ಥಿತರಿದ್ದರು.

ಹತ್ತು ದಿನಗಳಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ದೇಶದ 12 ರಾಜ್ಯಗಳ ರುಡ್‍ಸೆಟ್ ಸಂಸ್ಥೆಗಳ 38 ನಿರ್ದೇಶಕರುಗಳು ಭಾಗವಹಿಸುತ್ತಿದ್ದಾರೆ.