ಧರ್ಮಸ್ಥಳ: ನ.21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದಲ್ಲಿ ಹಲವಾರು ರೀತಿಯ ಜನಪರ ಕಾರ್ಯಕ್ರಮಗಳು ಹಾಗೂ ಜನರನ್ನು ಸುಶಿಕ್ಷಿತರನ್ನಾಗಿಸುವ ಹಲವಾರು ಯೋಜನೆಗಳನ್ನು ಕಳೆದ ನಾಲ್ಕು ದಶಕಗಳಿಂದ ಹಮ್ಮಿಕೊಂಡು ಬರಲಾಗಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂದರೆ ವಿಪತ್ತು ನಿರ್ವಹಣಾ ಕಾರ್ಯಕ್ರಮ. ವಿಪತ್ತುಗಳು ಹೇಳಿ ಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಆಪತ್ಭಾಂಧವರ ಅವಶ್ಯಕತೆ ಇದೆ. ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ್ಯಗಳನ್ನು ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ‘ಶ್ರೀ ಧರ್ಮಸ್ಥಳ ಶೌರ್ಯ ತಂಡ’ವಾಗಿದೆ. ಈಗಾಗಲೇ ರಾಜ್ಯದಲ್ಲಿ 32 ತಾಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ ಜನರಿಗೆ ಅಭಯ ನೀಡಲಾಗಿದೆ.
ಕಷ್ಟಕಾಲದಲ್ಲಿ ತಕ್ಷಣ ಪ್ರತಿಕ್ರಿಯೆ ನೀಡುವ ಮನಸ್ಸು, ಉತ್ಸಾಹ, ಧೈರ್ಯ ಇರುವವರಿಗೆ ಮಾತ್ರ ಈ ತಂಡದಲ್ಲಿ ಕೆಲಸ ಮಾಡಲು ಸಾಧ್ಯ. ಈಗಾಗಲೇ ಸುಮಾರು 6908 ವಿಪತ್ತು ಸೇವಾಕಾರ್ಯಗಳು, 7697 ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಾ ಕೇವಲ ಒಂದು ವರ್ಷ 7 ತಿಂಗಳಲ್ಲಿ 43815 ಮಾನವ ದಿನಗಳನ್ನು ವಿನಿಯೋಗಿಸಿ ಸಮಾಜದ ನಿಜವಾದ ಸೇವಕರಾಗಿ ಶ್ರಮಿಸಿರುವುದು ಶ್ರೇಷ್ಠ ಸಾಧನೆಯಾಗಿದೆ’ಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರಕಛೇರಿಯ ಸಭಾಭವನದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿಯ ಸಂಯೋಜಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಆಡಿಯೋ ಸಂದೇಶದಲ್ಲಿ ಮಾತನಾಡುತ್ತಾ ‘ಶೌರ್ಯ ಕಾರ್ಯಕ್ರಮದಿಂದ ಜನರಲ್ಲಿರುವ ವಿಪತ್ತಿನ ಭಯ ಕಡಿಮೆಯಾಗಿದೆ. ಯಾವುದೇ ಸಂದರ್ಭದಲ್ಲೂ ಶೌರ್ಯ ತಂಡ ಸಮಾಜ ಸೇವೆಗೆ ತಯಾರಾಗಿ ನಿಂತಿದೆ. ಸ್ವಯಂ ಜಾಗ್ರತೆಯಿಂದ ಇತರರನ್ನೂ ಕಾಪಾಡುವ ಬಗ್ಗೆ ಗಮನ ಹರಿಸಿ ಶೌರ್ಯ ತಂಡದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಬೇಕು’ ಎಂದು ತಿಳಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ‘ಶೌರ್ಯ ತಂಡದ ಸಂಯೋಜಕರು ಘಟಕದ ಮೇಲ್ವಿಚಾರಕರಿದ್ದಂತೆ. ತಮ್ಮ ತಂಡವನ್ನು ಮುನ್ನಡೆಸುವುದರ ಜೊತೆಗೆ ಕಾರ್ಯಕ್ರಮವನ್ನು ಪ್ರೀತಿಸಿ ಬೆಳೆಸುವ ಜವಾಬ್ದಾರಿಯನ್ನು ವಹಿಸುವುದು ಅವಶ್ಯಕವಾಗಿದೆ’ ಎಂದರು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್, ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಉರಗ ತಜ್ಞ ಸ್ನೇಕ್ ಜೋಯ್ ಉಜಿರೆ, ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ್, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮೋಹನ್ ಕೆ., ಮಾಧವ, ಯೋಜನಾಧಿಕಾರಿ ಜಯಕರ ಶೆಟ್ಟಿ, ಯಶವಂತ ಸಾಲ್ಯಾನ್ ತರಬೇತಿಯ ಮೇಲ್ವಿಚಾರಕ ಶ್ರೀ ದಿನೇಶ್ ಮರಾಠಿ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀ ಶಿಶುಪಾಲ್ ಪೂವಣಿ, ಜಾಗೃತಿ ಸೌಧ ಕಟ್ಟಡದ ಮೇಲ್ವಿಚಾರಕ ಕಿಶೋರ್ ಕಾರ್ಯಕ್ರಮಕ್ಕೆ ಸಹಕರಿಸಿದರು.