ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯವಲಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆಗೆ ಆಸಕ್ತ ಸಂಘ-ಸಂಸ್ಥೆಗಳಾದ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ ಬ್ಯಾಂಕ್, ಇತರ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿ/ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದ್ರಿ ಯೋಜನೆಯಡಿ ಅರ್ಜಿದಾರರು ಕಂಬೈನ್ಡ್ ಹಾರ್ವೆಸ್ಟರ್ ಹಾಗೂ ಬೇಲರ್‍ಅನ್ನು ಕಡ್ಡಾಯವಾಗಿ ಖರೀದಿಸಬೇಕಾಗಿದ್ದು, ಇವುಗಳೊಂದಿಗೆ ಹಾರ್ವೆಸ್ಟರ್ ಹಬ್‍ಗೆ ಅನುಮತಿಸಲಾದ ಇತರೆ ಉಪಕರಣಗಳನ್ನು ಸ್ಥಳೀಯ ಅವಶ್ಯಕತೆಗನುಗುಣವಾಗಿ ಖರೀದಿಸಬಹುದಾಗಿದೆ. ಸಂಘ-ಸಂಸ್ಥೆಗಳಿಗೆ ಶೇ. 70 ರ ಸಹಾಯಧನದಲ್ಲಿ ಗರಿಷ್ಠ 50 ಲಕ್ಷ ಹಾಗೂ ವೈಯಕ್ತಿಕ ಫಲಾನುಭವಿಗಳಿಗೆ ಶೇ. 50 ರ ಸಹಾಯಧನದಲ್ಲಿ ಗರಿಷ್ಠ 40 ಲಕ್ಷ ರೂ. ಸಹಾಯಧನವನ್ನು ಪ್ರತಿ ಹಾರ್ವೆಸ್ಟರ್ ಹಬ್ ರಚನೆಗೆ ಉಪಕರಣವಾರು ನಿಗಧಿಪಡಿಸಿದ ಗರಿಷ್ಠ ಸಹಾಯಧನದ ಮಿತಿಗೆ ಒಳಪಟ್ಟು ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ರೂಪದಲ್ಲಿ ಒದಗಿಸಲಾಗುವುದು.
ಅರ್ಜಿ ಸಲ್ಲಿಸಲು ಜುಲೈ 19 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.