ಉಡುಪಿ, ಜ. 18: ಉಡುಪಿ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಮಾಹೆ ವಿ.ವಿ ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಕ್ರೀಡಾ ಪ್ರದರ್ಶನವನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಕ್ರೀಡಾಸ್ಪರ್ಧೆಗಳನ್ನು ವೀಕ್ಷಿಸುವುದರೊಂದಿಗೆ ಕ್ರೀಡಾಪಟುಗಳನ್ನು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕರೆ ನೀಡಿದರು.

ಅವರು  ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ-2025 ರ ಸಮಾರೋಪ ಸಮಾರಂಭದ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ಉನ್ನತ ಸ್ಥಾನ ಪಡೆದ 8 ಕ್ರೀಡಾ ಸ್ಪರ್ಧಿಗಳು ಅಥವಾ ತಂಡಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾ ಸ್ಪರ್ಧೆಗಳನ್ನು ವೀಕ್ಷಿಸಲು ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಜಿಲ್ಲೆಯ ಕ್ರೀಡಾಭಿಮಾನಿಗಳು, ಕ್ರೀಡಾ ಪಟುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕ್ರೀಡೆಗಳನ್ನು ಪ್ರೋತ್ಸಹಿಸಬೇಕು ಎಂದರು.

ಕರ್ನಾಟಕ ಕ್ರೀಡಾ ಕೂಟದ ಸಮಾರೋಪ ಸಮಾರಂಭವು ಇದೇ ಜನವರಿ 23 ರಂದು ಸಂಜೆ 5 ಗಂಟೆಗೆ ನಗರದ ಅಜ್ಜರಕಾಡುವಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಘನತೆವೆತ್ತ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿಯೂ ಸಹ ಹೆಚ್ಚಿನ ಜನರು ಭಾಗವಹಿಸಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಯಲ್ಲಿಯೇ ಕ್ರೀಡಾ ಚಟವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಾಲಾ ಶಿಕ್ಷಕರು, ಪೋಷಕರು ಪ್ರೋತ್ಸಹಿಸಬೇಕು. ಕ್ರೀಡೆ ಮಾನವನ ಸದೃಢ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದ ಅವರು, ರಾಜ್ಯ ಸರಕಾರದ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ. 3 ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ನೇಮಕಾತಿಯ ಸಂದರ್ಭದಲ್ಲಿ ಶೇ. 2ರಷ್ಟು ಉದ್ಯೋಗ ಮೀಸಲಾತಿಯನ್ನು ಕ್ರೀಡಾ ಪಟುಗಳಿಗೆ ವಿಧಿಸುವುದು ವಿಶೇಷವಾಗಿದೆ ಎಂದರು.

ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್ ಮಾತನಾಡಿ, ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅದ್ಧೂರಿಯಾಗಿ ನಡೆಯುತ್ತಿದ್ದು, ಆಳ್ವಾಸ್ ವಿರಾಸತ್‍ನ ವಿದ್ಯಾರ್ಥಿಗಳ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೌಂಡ್ ಆಂಡ್ ಲೈಟ್ಸ್ ಕಾರ್ಯಕ್ರಮ ಸಹ ಅಂದು ಸಂಜೆ ನಡೆಯಲಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ರೀಡೆಯ ಬಗ್ಗೆ ಮಕ್ಕಳಿಗೆ ಹಾಗೂ ಯುವ ಜನರಿಗೆ ದೇಹಕ್ಕೆ ಹಾಗೂ ಮನಸ್ಸಿಗೆ ಆಗುವ ಲಾಭಗಳ ಬಗ್ಗೆ ಅವರುಗಳಲ್ಲಿ ಅರಿವು ಮೂಡಿಸಿ, ಕ್ರೀಡಾ ಚಟವಟಿಕೆಗಳಲ್ಲಿ ಭಾಗವಹಿಸುವುದು, ವೀಕ್ಷಿಸುವುದಕ್ಕೆ ಪ್ರೋತ್ಸಹಿಸಬೇಕು ಎಂದರು.

ಸಭೆಯಲ್ಲಿ ಎ.ಎಸ್.ಪಿ ಸಿದ್ಧಲಿಂಗಪ್ಪ, ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅನುಷ್ಟಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.